USA | ಏರ್ಪೋರ್ಟ್ ನಲ್ಲೇ ICE ವಲಸೆ ಅಧಿಕಾರಿಗಳ ಕಾರ್ಯಾಚರಣೆ: ಇಬ್ಬರನ್ನು ಎಳೆದೊಯ್ದು ಬಂಧಿಸಿದ ಮುಸುಕುಧಾರಿ ಏಜೆಂಟ್ ಗಳು
► ವಿಮಾನ ವಿಳಂಬದಿಂದ ಪ್ರಯಾಣಿಕರ ಪರದಾಟ

Photo: X.com/RT_com
ಸಿಯಾಟಲ್ (ಅಮೆರಿಕ): ವಿಮಾನ ಏರಲು ಸಿದ್ಧವಾಗಿದ್ದ ಪ್ರಯಾಣಿಕರ ನಡುವೆ ಬೆಳ್ಳಂಬೆಳಗ್ಗೆ ದಿಢೀರ್ ಪ್ರತ್ಯಕ್ಷರಾದ ಮುಸುಕುಧಾರಿ ವಲಸೆ ಅಧಿಕಾರಿಗಳು, ಇಬ್ಬರನ್ನು ಎಳೆದೊಯ್ದು ಬಂಧಿಸಿದ ಘಟನೆ ಅಮೆರಿಕದ ಸಿಯಾಟಲ್-ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ. ಅಕ್ರಮ ವಲಸಿಗರ ವಿರುದ್ಧ ಇಮಿಗ್ರೇಷನ್ ಆ್ಯಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ICE) ನಡೆಸಿದ ಈ ಕಾರ್ಯಾಚರಣೆಯಿಂದ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಗಿದ್ದು, ವಿಮಾನ ಪ್ರಯಾಣವೂ ವಿಳಂಬಗೊಂಡಿದೆ.
ವೀಸಾ ಅವಧಿ ಮುಗಿದ ಬಳಿಕವೂ ಅಮೆರಿಕದಲ್ಲಿ ಉಳಿದುಕೊಂಡಿದ್ದಾನೆ ಎಂದು ಆರೋಪಿಸಲಾದ ಮೆಕ್ಸಿಕೊದ ರಿಕಾರ್ಡೊ ಲಾರೊಂಡೊ ಮೆಂಡೋಝಾ ಅವರನ್ನು ಬಂಧಿಸಲು ICE ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಪ್ರಯಾಣಿಕರ ಗುಂಪಿನಿಂದ ವ್ಯಕ್ತಿಯನ್ನು ಅಧಿಕಾರಿಗಳು ಎಳೆದೊಯ್ಯುತ್ತಿರುವ ದೃಶ್ಯ ಘಟನೆಯ ವಿಡಿಯೊದಲ್ಲಿ ಸೆರೆಯಾಗಿದೆ.
ಈ ವೇಳೆ ಮಹಿಳೆಯೊಬ್ಬರು, "ನನ್ನ ಪುತ್ರಿಗೆ ಉದ್ಯೋಗ ಪರವಾನಗಿ ಇದೆ" ಎಂದು ಕಿರುಚುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಮಹಿಳಾ ಪ್ರಯಾಣಿಕರೊಬ್ಬರು ಬಿಸಿ ಕಾಫಿ ಎರಚಿದ್ದಾರೆ ಎಂದು ICE ತಿಳಿಸಿದೆ. ಆ ಮಹಿಳೆಯನ್ನು ಸೋಫಿಯಾ ಹೆರ್ನಾಂಡೆಝ್ ಮೇಜಿಯಾ ಎಂದು ಗುರುತಿಸಲಾಗಿದ್ದು, ಆಕೆ ಕೂಡ ವೀಸಾ ಅವಧಿ ಮುಗಿದ ಬಳಿಕ ಅಮೆರಿಕದಲ್ಲಿ ಉಳಿದುಕೊಂಡಿದ್ದಾಳೆ ಎಂದು ಸಂಸ್ಥೆ ಆರೋಪಿಸಿದೆ. ಫೆಡರಲ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ಈ ಘಟನೆಯಿಂದ ಪ್ರಯಾಣಿಕರು ತೊಂದರೆಗೀಡಾಗಿದ್ದು, ಲಾಸ್ ಏಂಜಲೀಸ್ಗೆ ತೆರಳಬೇಕಿದ್ದ ಅಲಾಸ್ಕಾ ಏರ್ಲೈನ್ಸ್ ವಿಮಾನ ವಿಳಂಬಗೊಂಡಿದೆ. ಬೆಳಗ್ಗೆ 8.10ಕ್ಕೆ ಹೊರಡಬೇಕಿದ್ದ ವಿಮಾನ ಸಂಖ್ಯೆ 1306 ವಿಳಂಬಗೊಂಡಿರುವುದು ಆನ್ಲೈನ್ ವಿಮಾನ ದತ್ತಾಂಶದಿಂದ ತಿಳಿದುಬಂದಿದೆ.
ICE ಅಧಿಕಾರಿಗಳ ಅನಿರೀಕ್ಷಿತ ಕಾರ್ಯಾಚರಣೆಗೆ ಅಲಾಸ್ಕಾ ಏರ್ಲೈನ್ಸ್ ಆಕ್ಷೇಪ ವ್ಯಕ್ತಪಡಿಸಿದೆ. ಕಾರ್ಯಾಚರಣೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಥ್ಯಾಂಕ್ಸ್ಗಿವಿಂಗ್ ರಜೆಗೆ ಮುನ್ನ ಜನದಟ್ಟಣೆಯ ವಾರಾಂತ್ಯದಲ್ಲಿ, ಪ್ರಯಾಣಿಕರು ವಿಮಾನ ಏರುತ್ತಿದ್ದ ವೇಳೆ ನಡೆದ ಕಾರ್ಯಾಚರಣೆ ಆತಂಕಕಾರಿ ಎಂದು ಸಂಸ್ಥೆ ಹೇಳಿದೆ.
ಘಟನೆಯಿಂದ ಪ್ರಯಾಣಿಕರು, ಉದ್ಯೋಗಿಗಳು ಹಾಗೂ ಇತರ ಅತಿಥಿಗಳಿಗೆ ಉಂಟಾದ ತೊಂದರೆಯ ಬಗ್ಗೆ ಅರ್ಥಮಾಡಿಕೊಳ್ಳಬಲ್ಲೆವು. ಪ್ರತಿಯೊಬ್ಬ ಅತಿಥಿಯನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳಲು ಬದ್ಧರಾಗಿದ್ದೇವೆ ಎಂದು ಅಲಾಸ್ಕಾ ಏರ್ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಬೇಸಿಗೆಯಿಂದ ICE ವಿಮಾನ ನಿಲ್ದಾಣಗಳಲ್ಲಿ ವೀಸಾ ಅವಧಿ ಮೀರಿದ ಬಳಿಕವೂ ಅಮೆರಿಕದಲ್ಲಿ ಉಳಿದುಕೊಂಡಿರುವ ವಲಸಿಗರನ್ನು ಬಂಧಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.






