ಚಾರ್ಲಿ ಕಿರ್ಕ್ಗೆ ಅಮೆರಿಕದ ಅತ್ಯುನ್ನತ ಮರಣೋತ್ತರ ನಾಗರಿಕ ಪುರಸ್ಕಾರ

ಎರಿಕಾ ಕಿರ್ಕ್ , ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್,ಅ.15: ಇತ್ತೀಚೆಗೆ ಗುಂಡೇಟಿಗೆ ಬಲಿಯಾದ ಅಮೆರಿಕದ ಬಲಪಂಥೀಯ ಚಿಂತಕ ಚಾರ್ಲಿ ಕಿರ್ಕ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಅಮೆರಿಕದ ಅತ್ಯುನ್ನತ ನಾಗರಿಕ ಪುರಸ್ಕಾರವನ್ನು ಮರಣೋತ್ತರವಾಗಿ ನೀಡಿದ್ದಾರೆ.
ವಾಶಿಂಗ್ಟನ್ನ ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಂ ’ ಪ್ರಶಸ್ತಿಯನ್ನು ಕಿರ್ಕ್ ಅವರ ಪತ್ನಿಗೆ ಅಶ್ರುಧಾರೆಯೊಂದಿಗೆ ಸ್ವೀಕರಿಸಿದರು. 31 ವರ್ಷದ ಕಿರ್ಕ್ ಅವರನ್ನು ಟ್ರಂಪ್, ವಿಶ್ವದ ಇತಿಹಾಸದ ಮಹಾನ್ ಚೇತನರಾದ ಸಾಕ್ರಟೀಸ್, ಸೈಂಟ್ ಪೀಟರ್, ಅಬ್ರಹಾಂ ಲಿಂಕನಂ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಹೋಲಿಸಿದರು.
ಕಿರ್ಕ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ತೀವ್ರವಾದಿ ಎಡಪಂಥೀಯ ಗುಂಪುಗಳನ್ನು ಸದೆಬಡಿಯುವ ಕಾರ್ಯಾಚರಣೆಯನ್ನು ದ್ವಿಗುಣಗೊಳಿಸಿರುವುದಾಗಿ ಟ್ರಂಪ್ ಹೇಳಿದರು.
ಚಾರ್ಲಿಯ ಹತ್ಯೆಯ ಹಿನ್ನೆಲೆಯಲ್ಲಿ ನಮ್ಮ ದೇಶವು ಈ ತೀವ್ರವಾದಿ ಎಡಪಂಥೀಯ,ತೀವ್ರವಾದಿ ಹಾಗೂ ಭಯೋತ್ಪಾದನೆಯನ್ನು ಯಾವತ್ತೂ ಸಹಿಸಲಾರದು’’ ಎಂದು ಸಂಪ್ರದಾಯವಾದಿ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸಭೆಯಲ್ಲಿ ತಿಳಿಸಿದರು. ನಮ್ಮ ನಗರಗಳನ್ನು ಅಸುರಕ್ಷಿತವಾಗಿರಲು ನಾವು ಬಿಡಲಾರೆವು ಎಂದು ಹೇಳಿದರು.
ಎರಡು ಮಕ್ಕಳ ತಂದೆಯಾದ ಕಿರ್ಕ್ ಅವರು ಕಳೆದ ತಿಂಗಳು ಉಟಾಹ್ ವಿವಿ ಆವರಣದಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭ ದುಷ್ಕರ್ಮಿಯೊಬ್ಬ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದನು.







