ಚಾರ್ಲಿ ಕಿರ್ಕ್ ಹತ್ಯೆಕೋರ ಬಂಧನ: ಡೊನಾಲ್ಡ್ ಟ್ರಂಪ್

PC : aljazeera.com
ವಾಷಿಂಗ್ಟನ್: ಕನ್ಸರ್ವೇಟಿವ್ ಹೋರಾಟಗಾರ ಚಾರ್ಲಿ ಕಿರ್ಕ್ ಹತ್ಯೆಕೋರನನ್ನು ಬಂಧಿಸಲಾಗಿದ್ದು, ಆತನ ಸಮೀಪವರ್ತಿಗಳು ಆತನನ್ನು ಶರಣಾಗತಿಗೆ ಮನವೊಲಿಸಿದ ನಂತರ, ಈ ಬಂಧನವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Fox Newsನೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಕಾನೂನು ಜಾರಿ ಪ್ರಾಧಿಕಾರಗಳು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಘೋಷಿಸಿದ್ದಾರೆ.
ಬುಧವಾರ ಉಟಾಹ್ ವ್ಯಾಲಿ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳು ಹಾಗೂ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡುವಾಗ ಚಾರ್ಲಿ ಕಿರ್ಕ್ ಅವರನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. “ನಾನು ತಪ್ಪಿತಸ್ಥನಾಗಿದ್ದರೆ ರುಜುವಾತು ಮಾಡಿ” ಎಂಬ ಕಿರ್ಕ್ ರ ಬಹು ಜನಪ್ರಿಯ ಘೋಷಣೆಯನ್ನು ಹೊಂದಿದ್ದ ಸಮಾವೇಶದಲ್ಲಿ ಬೃಹತ್ ಪ್ರಮಾಣದ ಜನರು ನೆರೆದಿದ್ದಾಗಲೇ ಹಾಡಹಗಲೇ ಅವರ ಹತ್ಯೆ ನಡೆದಿತ್ತು. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಹಿಂಸಾಚಾರದ ಕುರಿತು ಕಿರ್ಕ್ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾಗಲೇ ಗುಂಡೊಂದು ಅವರನ್ನು ಸೀಳಿಕೊಂಡು ಹೋಗಿರುವ ದೃಶ್ಯದ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಕಿರ್ಕ್ ತಮ್ಮ ಕತ್ತನ್ನು ಹಿಡಿದುಕೊಂಡಿರುವುದು, ಗಾಯದಿಂದ ರಕ್ತಸ್ರಾವವಾಗುತ್ತಿರುವುದು, ನಂತರ ಅವರು ಕುಸಿದು ಬೀಳುತ್ತಿರುವ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.
ಈ ಘಟನೆ ನಡೆಯುತ್ತಲೇ ಅಲ್ಲಿ ನೆರೆದಿದ್ದ ಜನರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಗಳೂ ಈ ವಿಡಿಯೊಗಳಲ್ಲಿ ಸೆರೆಯಾಗಿವೆ.
ಬಂದೂಕುಧಾರಿ ಒಂದು ಸುತ್ತಿನ ಗುಂಡು ಹಾರಿಸಿದ್ದು, ಆ ಬಂದೂಕು ಮೌಸೇರ್ 30-06 ಬೋಲ್ಟ್ ಆ್ಯಕ್ಷನ್ ರೈಫಲ್ ಎಂಬುದು ನಂತರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಯುಧವನ್ನು ಕಾರು ತಂಗುದಾಣದ ಆವರಣಕ್ಕೆ ಹೊಂದಿಕೊಂಡಂತಿರುವ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಆಯುಧದ ಮೇಲೆ ಹಸ್ತದ ಗುರುತನ್ನೂ ಪೊಲೀಸರು ಪತ್ತೆ ಹಚ್ಚಿದ್ದು, ಆ ಹಸ್ತದ ಗುರುತು ಶಂಕಿತ ಆರೋಪಿಯದ್ದಿರಬಹುದು ಎಂದು ಅನುಮಾನಿಸಲಾಗಿದೆ.







