ವ್ಯಾನ್ಸ್ ಜೊತೆ ಮಾತುಕತೆಗೆ ಕರೆ; ಕೆಲವೇ ಕ್ಷಣಗಳಲ್ಲಿ ವಜಾ: ಕೇಟಿ ಝಕಾರಿಯಾ ಪದಚ್ಯುತಿ ಹಿಂದೆ ಏನಾಯಿತು?
ಐದು ದಿನಗಳಷ್ಟೇ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಕೇಟಿ; ಹೊಸ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದ ಶ್ವೇತಭವನ

ಡೊನಾಲ್ಡ್ ಟ್ರಂಪ್ | Photo Credit : NDTV
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಐದು ದಿನಗಳಲ್ಲೇ ಕೇಟಿ ಝಕಾರಿಯಾ ಅವರ ಅಧಿಕಾರಾವಧಿ ಅಂತ್ಯಗೊಂಡಿದೆ ಎಂಬ ವರದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗೆ ಮಾತನಾಡಲು ಕರೆದೊಯ್ದ ಕೆಲವೇ ಕ್ಷಣಗಳಲ್ಲಿ ಅವರು ಕಚೇರಿಗೆ ಮರಳಲಿಲ್ಲ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿ ಮಾಡಿದೆ.
ಶುಕ್ರವಾರ ಕೇಟಿ ಅವರು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ರೂಸ್ ವೆಲ್ಟ್ ಕೊಠಡಿಯಲ್ಲಿ ಸಂವಹನ ತಂಡದ ಸಭೆಯಲ್ಲೂ ಭಾಗವಹಿಸಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತಮ್ಮ ವೆಸ್ಟ್ ವಿಂಗ್ ಕಚೇರಿಯಲ್ಲಿ ದಿ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ಸಂದರ್ಶನ ನೀಡುತ್ತಿದ್ದಾಗ ಟ್ರಂಪ್ ಅವರ ಹಿರಿಯ ಸಲಹೆಗಾರ ಜೇಸನ್ ಮಿಲ್ಲರ್ ಬಾಗಿಲು ತಟ್ಟಿದರು.
‘ಜೆ.ಡಿ. (ವ್ಯಾನ್ಸ್) ನಮ್ಮೊಂದಿಗೆ ಸ್ವಲ್ಪ ಮಾತನಾಡಲು ಬಯಸುತ್ತಿದ್ದಾರೆ’ ಎಂದು ಮಿಲ್ಲರ್ ತಿಳಿಸಿದರು. ಬಳಿಕ ವ್ಯಾನ್ಸ್ ಅವರನ್ನು ಭೇಟಿಯಾಗಲು ಕಚೇರಿಯಿಂದ ಹೊರನಡೆದ ಕೇಟಿ ಮತ್ತೆ ಕೆಲಸಕ್ಕೆ ಮರಳಲಿಲ್ಲ. ಸಂದರ್ಶನವೂ ಅಪೂರ್ಣವಾಗಿ ಉಳಿಯಿತು.
ಆ ಸಮಯದಲ್ಲಿ ಟ್ರಂಪ್ ತಮ್ಮ ಹೊಸ ಹೆಲಿಪ್ಯಾಡ್ ನಲ್ಲಿದ್ದರು. ಅಂದು ಮುಂಜಾನೆ ಕೇಟಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನೆನಪಿಸಿಕೊಂಡ ಅವರು, ‘ಕೇಟಿ, ನಿಮಗೆ ನಿಜವಾಗಿಯೂ ಈ ಕೆಲಸದ ಅಗತ್ಯವಿದೆಯೇ? ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿಮಗೆ ಇದರ ಅಗತ್ಯವಿಲ್ಲ’ ಎಂದು ಹೇಳಿದ್ದಾಗಿ ಸುದ್ದಿಗಾರರಿಗೆ ತಿಳಿಸಿದರು. ತಾವು ಆಕೆಯ ಸ್ಥಾನದಲ್ಲಿದ್ದರೆ ಈ ಉದ್ಯೋಗದ ಬಗ್ಗೆ ಮತ್ತೊಮ್ಮೆ ಯೋಚಿಸುತ್ತಿದ್ದೆ ಎಂದೂ ಟ್ರಂಪ್ ಹೇಳಿದ್ದರು.
►‘ಸಾಧ್ಯವಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿದೆ’
ಸಂಜೆ WSJ ಪತ್ರಿಕೆಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಕೇಟಿ, ತಮ್ಮ ಬಳಿಯಿದ್ದ ಸೀಮಿತ ಸಮಯ ಮತ್ತು ಮಾಹಿತಿಯಲ್ಲೇ ಪತ್ರಿಕಾ ಗೋಷ್ಠಿ ನಡೆಸಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದಾಗಿ ಹೇಳಿದರು.
‘ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕದ ಜನರಿಗೆ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮ ಸೇವೆ ಸಲ್ಲಿಸುವುದೇ ನನ್ನ ಗುರಿಯಾಗಿತ್ತು’ ಎಂದು ಅವರು ತಿಳಿಸಿದರು.
ಪತ್ರಿಕಾ ಕಾರ್ಯದರ್ಶಿಯಾಗಿ ಕೇಟಿ ಅವರ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಮೊದಲ ಪತ್ರಿಕಾ ಗೋಷ್ಠಿಯಲ್ಲಿನ ಅವರ ಪ್ರದರ್ಶನ ನೀರಸವಾಗಿತ್ತು. ಅವರ ಹಿನ್ನೆಲೆ ಮತ್ತು ವೃತ್ತಿಪರ ಅರ್ಹತೆಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು.
ಕೇಟಿ ತಮ್ಮನ್ನು ದೀರ್ಘಕಾಲದಿಂದ ವಕೀಲರೆಂದು ಪರಿಚಯಿಸಿಕೊಂಡಿದ್ದರು. ಆದರೆ, ಅಮೆರಿಕದ ಯಾವುದೇ ರಾಜ್ಯದಲ್ಲಿ ಅಥವಾ ಈ ಹಿಂದೆ ಚೀನಾದ ದೊಡ್ಡ ಕಾನೂನು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ವಕೀಲರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ.
ನಂತರ, ಕೇಟಿ ಎಂದಿಗೂ ವಕೀಲರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ ಎಂದು WSJ ವರದಿ ಮಾಡಿತು. ಈ ವಿವಾದದ ನಡುವೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವರು ಫಾಕ್ಸ್ ನ್ಯೂಸ್ನಲ್ಲಿ ಪದೇ ಪದೇ ಕಾಣಿಸಿಕೊಂಡರೂ, ಅದರಿಂದ ಅವರಿಗೆ ಅನುಕೂಲವಾಗಲಿಲ್ಲ ಎಂದು ವರದಿ ತಿಳಿಸಿದೆ.
►ಹೊಸ ಹುದ್ದೆಯಲ್ಲಿ ಸಿಗಲಿದೆಯೇ?
ಕೇಟಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಊಹಾಪೋಹಗಳನ್ನು ಶ್ವೇತಭವನ ತಳ್ಳಿಹಾಕಿದೆ. ಅವರು ಟ್ರಂಪ್ ಆಡಳಿತದಲ್ಲಿ ಮುಂದುವರಿಯಲಿದ್ದು, ಶೀಘ್ರದಲ್ಲೇ ಘೋಷಿಸಲಿರುವ ಹೊಸ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.
ಹೀಗಾಗಿ, ಕೇಟಿ ಅವರ ಪತ್ರಿಕಾ ಕಾರ್ಯದರ್ಶಿ ಹುದ್ದೆಯ ಅಲ್ಪಾವಧಿ ಮತ್ತು ಅವರ ಮುಂದಿನ ಜವಾಬ್ದಾರಿಯ ಕುರಿತು ಶ್ವೇತಭವನದ ಅಧಿಕೃತ ಹೇಳಿಕೆ ಕುತೂಹಲ ಮೂಡಿಸಿದೆ.






