ಇರಾನ್ ಗೆ ವಾಯುರಕ್ಷಣಾ ವ್ಯವಸ್ಥೆ ಪೂರೈಕೆಗೆ ಚೀನಾ ತಯಾರಿ: ಅಮೆರಿಕ ಗುಪ್ತಚರ ಏಜೆನ್ಸಿ ವರದಿ

ಸಾಂದರ್ಭಿಕ ಚಿತ್ರ | Photo Credit : AP , PTI
ವಾಶಿಂಗ್ಟನ್, ಎ.11: ಮುಂದಿನ ವಾರಗಳಲ್ಲಿ ಇರಾನ್ ಗೆ ವಾಯುರಕ್ಷಣಾ ವ್ಯವಸ್ಥೆಯನ್ನು ಪೂರೈಸಲು ಚೀನಾ ತಯಾರಿ ನಡೆಸುತ್ತಿರುವ ಸೂಚನೆಗಳಿವೆ ಎಂದು ಅಮೆರಿಕದ ಗುಪ್ತಚರ ಏಜೆನ್ಸಿಯ ವರದಿ ತಿಳಿಸಿದೆ.
ಮಾಹಿತಿಯ ಪ್ರಕಾರ, ಚೀನಾವು ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಇರಾನ್ ಗೆ ವರ್ಗಾಯಿಸಲು ಯೋಜಿಸುತ್ತಿದೆ. ಮೂಲವನ್ನು ಮರೆಮಾಚುವ ಸಲುವಾಗಿ ಈ ಸಾಗಣೆಗಳನ್ನು ಮೂರನೇ ದೇಶದ ಮೂಲಕ ಸಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ CNN ವರದಿ ಮಾಡಿದೆ.
ಚೀನಾವು ಇರಾನ್ ಗೆ ದ್ವಿ-ಬಳಕೆಯ ತಂತ್ರಜ್ಞಾನ, ಗುಪ್ತಚರ ಬೆಂಬಲ ಮತ್ತು ಕ್ಷಿಪಣಿ ಸಂಬಂಧಿತ ಸಹಾಯವನ್ನು ಒದಗಿಸಿದೆ. ಈ ಕ್ರಮಗಳು ಇರಾನ್ ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿವೆ ಎಂದು ವರದಿಗಳು ಹಾಗೂ ಕಾರ್ಯನೀತಿ ಮೌಲ್ಯಮಾಪನಗಳು ಸೂಚಿಸಿವೆ.
ಈ ವರದಿಯನ್ನು ವಾಶಿಂಗ್ಟನ್ ನಲ್ಲಿನ ಚೀನಾದ ರಾಯಭಾರ ಕಚೇರಿ ತಿರಸ್ಕರಿಸಿದ್ದು, ಸಂಘರ್ಷದಲ್ಲಿನ ಯಾವುದೇ ಪಕ್ಷಕ್ಕೆ ಎಂದಿಗೂ ಶಸ್ತ್ರಾಸ್ತ್ರಗಳನ್ನು ಒದಗಿಸಿಲ್ಲ ಎಂದು ಹೇಳಿದೆ.





