ತೈವಾನ್ ಸುತ್ತ ಮಿಲಿಟರಿ ಸಮರಾಭ್ಯಾಸ: ಚೀನಾ ಘೋಷಣೆ

Photo Credit : AP \ PTI
ಬೀಜಿಂಗ್, ಡಿ.29: ತೈವಾನ್ನ ಸ್ವಾತಂತ್ರ್ಯಕ್ಕಾಗಿ ಯಾವುದೇ ಕ್ರಮ ಮತ್ತು ಬಾಹ್ಯ ಹಸ್ತಕ್ಷೇಪದ ವಿರುದ್ಧ ಬಲವಾದ ಎಚ್ಚರಿಕೆಯನ್ನು ರವಾನಿಸುವ ಉದ್ದೇಶದಿಂದ ಪ್ರಮುಖ ಸಮರಾಭ್ಯಾಸಕ್ಕಾಗಿ ತೈವಾನ್ನ ಸುತ್ತಲೂ ತನ್ನ ಸೇನೆ, ನೌಕಾಪಡೆ, ವಾಯುಪಡೆ ಮತ್ತು ರಾಕೆಟ್ ಘಟಕಗಳನ್ನು ಸಜ್ಜುಗೊಳಿಸುತ್ತಿರುವುದಾಗಿ ಚೀನಾದ ಮಿಲಿಟರಿ ಸೋಮವಾರ ಹೇಳಿದೆ.
`ಜಸ್ಟಿಸ್ ಮಿಷನ್-2025' ಎಂದು ಹೆಸರಿಸಲಾದ ಸಮರಾಭ್ಯಾಸವು ಯುದ್ದದ ಸನ್ನದ್ಧತೆ ಮತ್ತು ಪ್ರಮುಖ ಬಂದರು ಮತ್ತು ಪ್ರದೇಶಗಳನ್ನು ನಿರ್ಬಂಧಿಸುವ ಮತ್ತು ನಿಯಂತ್ರಿಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ದ್ವೀಪದ ಸುತ್ತ ಐದು ವಲಯಗಳಲ್ಲಿ ಗುಂಡು ಹಾರಿಸುವ ಅಭ್ಯಾಸವೂ ನಡೆಯುತ್ತದೆ. ಮುಚ್ಚುವುದು, ನಿಯಂತ್ರಣಕ್ಕೆ ಪಡೆಯುವುದು ಮತ್ತು ತಪ್ಪಿಸಿಕೊಳ್ಳುವುದನ್ನು ತಡೆಯುವ ಉದ್ದೇಶದ ಸಮರಾಭ್ಯಾಸ ಇದಾಗಿದೆ. ಚೀನಾದ ಸಾರ್ವಭೌಮತೆ ಮತ್ತು ಏಕತೆಯನ್ನು ರಕ್ಷಿಸಲು ಇದು ಅತ್ಯಗತ್ಯವಾಗಿದೆ ಎಂದು ಚೀನಾದ ಮಿಲಿಟರಿ ಹೇಳಿದೆ.
ಸಮರಾಭ್ಯಾಸದ ಹೆಸರಿನಲ್ಲಿ ನಡೆಯುವ ಮಿಲಿಟರಿ ಬೆದರಿಕೆಯು ತೈವಾನ್ ಜಲಸಂಧಿ ಮತ್ತು ಇಂಡೊ ಪೆಸಿಫಿಕ್ ವಲಯದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಹಾಳು ಮಾಡುತ್ತದೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳಿಗೆ ಸವಾಲು ಹಾಕುತ್ತದೆ. ಇದರ ವಿರುದ್ಧ ತೈವಾನ್ ಸಂಪೂರ್ಣ ಜಾಗರೂಕವಾಗಿದೆ ಮತ್ತು ತನ್ನ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ತೈವಾನ್ ಸರಕಾರ ಪ್ರತಿಕ್ರಿಯಿಸಿದೆ.





