ಆನ್ಲೈನ್ ಗೇಮಿಂಗ್ ನಿರ್ಬಂಧಕ್ಕೆ ಚೀನಾ ನಿರ್ಧಾರ

Representational Image (Credit: freepik.com)
ಬೀಜಿಂಗ್: ವರ್ಚುವಲ್ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಲು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಆನ್ಲೈನ್ ಗೇಮಿಂಗ್ನಲ್ಲಿ ಅತಿಯಾದ ಖರ್ಚು ಮಾಡುವುದನ್ನು ನಿರ್ಬಂಧಿಸುವ ಕರಡು ಮಾರ್ಗಸೂಚಿಗಳನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.
ಈ ಪ್ರಸ್ತಾವನೆ ವರದಿಯಾಗುತ್ತಿದ್ದಂತೆಯೇ ಶೇರು ಮಾರುಕಟ್ಟೆಯಲ್ಲಿ ಚೀನಾದ ದೊಡ್ಡ ಗೇಮಿಂಗ್ ಕಂಪೆನಿಗಳಾದ ಟೆನ್ಸೆಂಟ್ ಮತ್ತು ನೆಟ್ಈಸ್ನ ಶೇರುಗಳ ಮೌಲ್ಯ ಕುಸಿದಿದೆ ಎಂದು ವರದಿಯಾಗಿದೆ.
ಆನ್ಲೈನ್ ಗೇಮಿಂಗ್ಗಳು ದೈನಂದಿನ ಲಾಗಿನ್ಗೆ ಪ್ರೋತ್ಸಾಹಧನ ಅಥವಾ ಖರೀದಿಗೆ ಪ್ರೋತ್ಸಾಹ ನೀಡುವುದಿಲ್ಲ ಚೀನಾದ ಆನ್ಲೈನ್ ಗೇಮ್ ನಿಯಂತ್ರಣ ಪ್ರಾಧಿಕಾರ `ದಿ ನ್ಯಾಷನಲ್ ಪ್ರೆಸ್ ಆ್ಯಂಡ್ ಪಬ್ಲಿಕೇಷನ್ ಅಡ್ಮಿನಿಸ್ಟ್ರೇಷನ್' ಬಿಡುಗಡೆಗೊಳಿಸಿದ ಮಾರ್ಗಸೂಚಿ ಹೇಳಿದೆ. ಬಳಕೆದಾರರು ಎಷ್ಟು ರಿಚಾರ್ಜ್ ಮಾಡಬಹುದು ಎಂಬುದನ್ನು ಮಿತಿಗೊಳಿಸುವುದು ಮತ್ತು ತರ್ಕಬದ್ಧವಲ್ಲದ ಬಳಕೆಯ ಬಗ್ಗೆ ಎಚ್ಚರ ವಹಿಸುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ಗೇಮ್ಸ್ ಕ್ಷೇತ್ರದ ವಿರುದ್ಧ ಚೀನಾ ಹಲವು ಕ್ರಮಗಳನ್ನು ಕೈಗೊಂಡಿದೆ. 2021ರಲ್ಲಿ ಜಾರಿಗೊಳಿಸಿದ ಕಾನೂನಿನ ಪ್ರಕಾರ ಮಕ್ಕಳು ವಾರದಲ್ಲಿ ಕೇವಲ 3 ಗಂಟೆ ಮಾತ್ರ ಆನ್ಲೈನ್ ಗೇಮ್ಸ್ನಲ್ಲಿ ಸಮಯ ಕಳೆಯಬಹುದಾಗಿದೆ.





