ಚೀನಾ: ಮತ್ತೊಂದು ನಿಗೂಢ ಸಾಂಕ್ರಾಮಿಕ ಉಲ್ಬಣ
ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಂಕು; ವರದಿ ಕೇಳಿದ ವಿಶ್ವಸಂಸ್ಥೆ

ಸಾಂದರ್ಭಿಕ ಚಿತ್ರ | Photo: PTI
ಬೀಜಿಂಗ್: ಚೀನಾದ ಉತ್ತರ ಭಾಗದಲ್ಲಿ ಶೀತಜ್ವರದ ರೀತಿಯ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದ್ದು ಇದು ಹೆಚ್ಚಾಗಿ ಮಕ್ಕಳಲ್ಲಿ ಕ್ಷಿಪ್ರವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಿಗೂಢ ಸಾಂಕ್ರಾಮಿಕದ ಬಗ್ಗೆ ಮಾಹಿತಿ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಗಳನ್ನು ಕೋರಿದೆ.
ಚೀನಾದ ಆಸ್ಪತ್ರೆಗಳು ಉಸಿರಾಟದ ಕಾಯಿಲೆಯ ಲಕ್ಷಣಗಳನ್ನು ಹೊಂದಿರುವ ಮಕ್ಕಳಿಂದ ತುಂಬಿ ಹೋಗಿವೆ. ದೇಶದಲ್ಲಿ ಉಸಿರಾಟದ ಕಾಯಿಲೆಯ ಪ್ರಕರಣ ದಿಢೀರನೆ ಉಲ್ಬಣಗೊಂಡಿದ್ದು ಕೋವಿಡ್ ನಿರ್ಬಂಧ ಸಡಿಲಿಸಿರುವುದು ಇದಕ್ಕೆ ಪ್ರಮುಖ ಕಾರಣವೆಂದು ನ. 12ರಂದು ಸುದ್ಧಿಗೋಷ್ಟಿಯಲ್ಲಿ ಚೀನಾದ ರಾಷ್ಟ್ರೀಯ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಅನಾರೋಗ್ಯದ ಮಕ್ಕಳಿಗೆ ಯಾವುದೇ ರೋಗಲಕ್ಷಣ ಅಥವಾ ಕೆಮ್ಮು ಇರುವುದಿಲ್ಲ. ಆದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ಲಿಯಾನಿಂಗ್ ಪ್ರಾಂತದ ದಲಿಯನ್ ಮಕ್ಕಳ ಆಸ್ಪತ್ರೆಯ ಆವರಣ ಅಸ್ವಸ್ಥ ಮಕ್ಕಳಿಂದ ತುಂಬಿ ಹೋಗಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿರುವುದರಿಂದ ಆವರಣದಲ್ಲಿಯೇ ಕೆಲವು ಮಕ್ಕಳಿಗೆ ಡ್ರಿಪ್ ಹಾಕಿ ಮಲಗಿಸುವ ಪರಿಸ್ಥಿತಿಯಿದ್ದು ಚಿಕಿತ್ಸೆ ಪಡೆಯಲು ಕನಿಷ್ಟ 2 ಗಂಟೆ ಕಾಯಬೇಕಾಗಿದೆ.
ಸಾಂಪ್ರದಾಯಿಕ ಚೀನೀ ಔಷಧಿ ಆಸ್ಪತ್ರೆಗಳು ಮತ್ತು ಕೇಂದ್ರೀಯ ಆಸ್ಪತ್ರೆಗಳಲ್ಲಿಯೂ ರೋಗಿಗಳ ಸರತಿ ಸಾಲುಗಳಿವೆ. ಶಾಲಾ ವಿದ್ಯಾರ್ಥಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು ಕೆಲವು ಶಿಕ್ಷಕರು ಕೂಡಾ ಸೋಂಕಿಗೆ ಒಳಗಾಗಿದ್ದಾರೆ. ಕೆಲವು ಶಾಲೆಗಳನ್ನು ಮುಚ್ಚಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಸಿಕೆ ಹಾಕಿಕೊಳ್ಳುವುದು, ಅನಾರೋಗ್ಯ ಪೀಡಿತರಿಂದ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಜನರಿಗೆ ಸೂಚಿಸಲಾಗಿದೆ.
ದೇಶದಲ್ಲಿನ ಸಾರ್ಸ್, ಕೋವಿಡ್, ಆರ್ಎಸ್ವಿ ಸಹಿತ ವಿವಿಧ ಜ್ವರಗಳ ಬಗ್ಗೆ ವಿವರವಾದ ಮಾಹಿತಿ ಒದಗಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಕೋರಿದೆ.







