ಪಾಕಿಸ್ತಾನಕ್ಕೆ ಮೂರನೆ ಹ್ಯಾಂಗರ್ ದರ್ಜೆಯ ಜಲಾಂತರ್ಗಾಮಿ ನೌಕೆ ಹಸ್ತಾಂತರಿಸಿದ ಚೀನಾ

PC : @PAFFalconsPK
ಬೀಜಿಂಗ್: ಭಾರತದ ಪಾರಮ್ಯ ಹೊಂದಿರುವ ಹಿಂದೂ ಮಹಾ ಸಾಗರದಲ್ಲಿ ಪಾಕಿಸ್ತಾನ ನೌಕಾಪಡೆಯ ಸಾಮರ್ಥ್ಯವನ್ನು ಉನ್ನತೀಕರಿಸುವ ಮೂಲಕ, ಅದರ ಬೆಳೆಯುತ್ತಿರುವ ಉಪಸ್ಥಿತಿಗೆ ನೆರವು ಒದಗಿಸುವ ಭಾಗವಾಗಿ ಚೀನಾ ತನ್ನ ಎಂಟು ಸುಧಾರಿತ ಹ್ಯಾಂಗರ್ ದರ್ಜೆಯ ಜಲಾಂಗರ್ಗಾಮಿ ನೌಕೆಗಳ ಪೈಕಿ ಮೂರನೆಯದನ್ನು ಪಾಕಿಸ್ತಾನಕ್ಕೆ ಪೂರೈಸಿದೆ.
ಮೂರನೆ ಹ್ಯಾಂಗರ್ ದರ್ಜೆಯ ಜಲಾಂತರ್ಗಾಮಿ ನೌಕೆಯ ಉದ್ಘಾಟನಾ ಕಾರ್ಯಕ್ರಮವನ್ನು ಗುರುವಾರ ಕೇಂದ್ರ ಚೀನಾದ ಹುಬೇಯಿ ಪ್ರಾಂತ್ಯದ ವುಹಾನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು ಎಂದು ಶನಿವಾರ ಸರಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನಕ್ಕಾಗಿ ನಿರ್ಮಿಸುತ್ತಿರುವ ಎಂಟು ಜಲಾಂತರ್ಗಾಮಿ ನೌಕೆಗಳ ಪೈಕಿ ಎರಡನೆ ನೌಕೆಯನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಚೀನಾ ಪಾಕಿಸ್ತಾನಕ್ಕೆ ಹಸ್ತಾಂತರಿಸಿತ್ತು.
ಬಲೂಚಿಸ್ತಾನದಲ್ಲಿ ಗ್ವಾದರ್ ಬಂದರನ್ನು ಅಭಿವೃದ್ಧಿಪಡಿಸುವ ಮೂಲಕ ಅರಬ್ಬೀ ಸಮುದ್ರದಲ್ಲಿ ಚೀನಾ ನೌಕಾಪಡೆಯು ಸ್ಥಿರವಾದ ವಿಸ್ತರಣೆ ಮಾಡುತ್ತಿರುವ ಹೊತ್ತಿನಲ್ಲೇ, ಪಾಕಿಸ್ತಾನದ ನೌಕಾಪಡೆಯ ಸಾಮರ್ಥ್ಯವನ್ನು ಉನ್ನತೀಕರಿಸುವ ತನ್ನ ಪ್ರಯತ್ನದ ಭಾಗವಾಗಿ ಚೀನಾ ಕಳೆದ ಕೆಲವು ವರ್ಷಗಳಲ್ಲಿ ಪೂರೈಸಿರುವ ನಾಲ್ಕು ಆಧುನಿಕ ಜಲಾಂತರ್ಗಾಮಿ ನೌಕೆಗಳೊಂದಿಗೆ ಈ ಜಲಾಂತರ್ಗಾಮಿ ನೌಕೆಗಳನ್ನು ಪೂರೈಸುತ್ತಿದೆ. ಚೀನಾ ನೌಕಾಪಡೆ ಹಿಂದೂ ಮಹಾ ಸಾಗರದಲ್ಲೂ ತನ್ನ ಉಪಸ್ಥಿತಿಯನ್ನು ವಿಸ್ತರಿಸುತ್ತಾ ಸಾಗಿದೆ.
ಮೂರನೆಯ ಜಲಾಂತರ್ಗಾಮಿ ನೌಕೆಯ ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ನೌಕಾಪಡೆ ಸಿಬ್ಬಂದಿ ಯೋಜನೆ-2ರ ಉಪ ಮುಖ್ಯಸ್ಥರಾದ ವೈಸ್ ಅಡ್ಮಿರಲ್ ಅಬ್ದುಲ್ ಸಮದ್, ಹ್ಯಾಂಗರ್ ದರ್ಜೆಯ ಜಲಾಂತರ್ಗಾಮಿ ನೌಕೆ ನಿಖರ ಆಯುಧವಾಗಿದ್ದು, ಪ್ರಾದೇಶಿಕ ಶಕ್ತಿ ಸಮತೋಲನ ಹಾಗೂ ಸಾಗರದಲ್ಲಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಅದರಲ್ಲಿನ ಸುಧಾರಿತ ಸಂವೇದಕಗಳು ನಿರ್ಣಾಯಕವಾಗಿವೆ ಎಂದು ಹೇಳಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಹೇಳಿಕೆಯನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ದೈನಿಕ ವರದಿ ಮಾಡಿದೆ.







