ಚೀನಾ: 2021ರ ಬಳಿಕ ಪ್ರಥಮ ಬಾರಿಗೆ ಹಿಮ್ಮುಖ ಹಣದುಬ್ಬರ

Photo : PTI
ಬೀಜಿಂಗ್: ಚೀನಾದ ಗ್ರಾಹಕ ಮತ್ತು ಉತ್ಪಾದಕ ಬೆಲೆಗಳು ಜುಲೈಯಲ್ಲಿ ಕುಸಿತ ಕಂಡಿದ್ದು 2021ರ ಬಳಿಕ ಪ್ರಥಮ ಬಾರಿಗೆ ಹಿಮ್ಮುಖ ಹಣದುಬ್ಬರ ದಾಖಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಇಳಿಕೆಯಾದಾಗ, ಹಣದುಬ್ಬರ ದರವು 0%ಕ್ಕಿಂತ ಕಡಿಮೆಯಾದಾಗ ಹಣದುಬ್ಬರವಿಳಿತ ಅಥವಾ ಹಿಮ್ಮುಖ ಹಣದುಬ್ಬರ ಸಂಭವಿಸುತ್ತದೆ. ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆಯಾದ ಚೀನಾದಲ್ಲಿ ಜುಲೈಯಲ್ಲಿ ಗ್ರಾಹಕ ದರ ಸೂಚ್ಯಂಕವು 0.3%ಕ್ಕೆ ಇಳಿದಿದ್ದು 2021ರ ಫೆಬ್ರವರಿ ಬಳಿಕ ಇದೇ ಮೊದಲ ಬಾರಿ ಸೂಚ್ಯಂಕವು ಕುಸಿತವನ್ನು ದಾಖಲಿಸಿದೆ. ಉತ್ಪಾದಕ ಬೆಲೆ ಸತತ 10ನೇ ತಿಂಗಳು ಕುಸಿತ ಕಂಡಿದ್ದು ಸೂಚ್ಯಂಕ 4.4%ಕ್ಕೆ ಇಳಿದಿದೆ ಎಂದು `ನ್ಯಾಷನಲ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್' ವರದಿ ಮಾಡಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಕಟ್ಟುನಿಟ್ಟಿನ ನಿರ್ಬಂಧ ಸಡಿಲಿಸಿದ ಬಳಿಕ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಗ್ರಾಹಕ ಮತ್ತು ವ್ಯಾಪಾರ ಬೇಡಿಕೆಯಲ್ಲಿ ಹೆಚ್ಚಳ ದಾಖಲಾದರೂ ಆ ಬಳಿಕ ಬೇಡಿಕೆ ನಿರಂತರ ಕುಸಿತ ದಾಖಲಿಸಿದೆ.
ಹಣದುಬ್ಬರವಿಳಿತವನ್ನು `ಬೆಲೆಗಳ ಒಟ್ಟು ಪ್ರಮಾಣದಲ್ಲಿ ನಿರಂತರ ಕುಸಿತ' ಎಂದು ಐಎಂಎಫ್ ವಿಶ್ಲೇಷಿಸಿದೆ.