ಚೀನಾ ಹಿಂಸಾಚಾರಕ್ಕೆ ಹೆದರುವುದಿಲ್ಲ: ಕ್ಸಿ ಜಿಂಪಿಂಗ್

ಕ್ಸಿ ಜಿಂಪಿಂಗ್ | PC : NDTV
ಬೀಜಿಂಗ್, ಸೆ.3: ಚೀನಾವು ಮಹಾನ್ ದೇಶವಾಗಿದ್ದು ಹಿಂಸಾಚಾರಕ್ಕೆ ಹೆದರದೆ ಸ್ವತಂತ್ರ ಮತ್ತು ಬಲಿಷ್ಠವಾಗಿ ನಿಲ್ಲುವ ಸಾಮರ್ಥ್ಯವಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಬುಧವಾರ ಹೇಳಿದ್ದಾರೆ.
ಶಾಂತಿ ಮತ್ತು ಯುದ್ಧದ ನಡುವೆ ಆಯ್ಕೆ ಮಾಡಿಕೊಳ್ಳುವ ಸವಾಲು ಜಗತ್ತಿಗೆ ಎದುರಾಗಿದೆ. ಇಂದು ಮನುಕುಲವು ಮತ್ತೊಮ್ಮೆ ಶಾಂತಿ ಮತ್ತು ಯುದ್ಧ, ಮಾತುಕತೆ ಮತ್ತು ಮುಖಾಮುಖಿ, ಪರಸ್ಪರ ಲಾಭ ಮತ್ತು ಶೂನ್ಯ ಮೊತ್ತದ ಸ್ಪಧೆ(ಮತ್ತೊಬ್ಬರಿಗೆ ನಷ್ಟ ಉಂಟು ಮಾಡಿ ಲಾಭ ಪಡೆಯುವುದು)ಯ ನಡುವಿನ ಆಯ್ಕೆಯನ್ನು ಎದುರಿಸುತ್ತಿದೆ. ಚೀನಾದ ಜನರು ಯಾವತ್ತೂ ಇತಿಹಾಸದ ಸರಿಯಾದ ಬದಿಯಲ್ಲೇ ದೃಢವಾಗಿ ನಿಂತಿದ್ದಾರೆ ಎಂದವರು ಇದೇ ಸಂದರ್ಭ ಪ್ರತಿಪಾದಿಸಿದ್ದಾರೆ.
ಎರಡನೇ ವಿಶ್ವಯುದ್ಧದಲ್ಲಿ ಜಪಾನ್ ವಿರುದ್ಧ ದೇಶದ ಗೆಲುವಿನ 80ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಬೀಜಿಂಗ್ನ ಟಿಯಾನನ್ಮೆನ್ ಚೌಕದಲ್ಲಿ ಅಯೋಜಿಸಲಾದ ಬೃಹತ್ ಮಿಲಿಟರಿ ಪರೇಡ್ ನಲ್ಲಿ ಜಿಂಪಿಂಗ್ ಮಾತನಾಡಿದರು. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಚೀನಾ ಅಧ್ಯಕ್ಷರ ಜೊತೆಗಿದ್ದರು.
ಅತ್ಯಾಧುನಿಕ ಲೇಸರ್ ಶಸ್ತ್ರಾಸ್ತ್ರಗಳು, ಪರಮಾಣು ಸಿಡಿತಲೆಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ರೋಬೋಟ್ ತೋಳಗಳು, ಹೈಪರ್ಸಾನಿಕ್ ಕ್ಷಿಪಣಿಗಳು, ಸುಧಾರಿತ ತಂತ್ರಜ್ಞಾನದ ಡ್ರೋನ್ ಗಳು, ನೌಕೆಯಿಂದ ಉಡಾವಣೆಗೊಳಿಸುವ ಮಾನವ ರಹಿತ ಹೆಲಿಕಾಪ್ಟರ್ ಗಳು, ಸಬ್ ಮೆರಿನ್ ಗಳ ಪರೇಡ್ ಅನ್ನು 50,000ಕ್ಕೂ ಅಧಿಕ ಮಂದಿ ವೀಕ್ಷಿಸಿದರು.
*ಅಮೆರಿಕಾಕ್ಕೆ ಸ್ಪಷ್ಟ ಸಂದೇಶ ರವಾನೆ
ಬುಧವಾರ ನಡೆದ ಬೃಹತ್ ಮಿಲಿಟರಿ ಪರೇಡ್ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಚೀನಾದ ಮಿಲಿಟರಿ ಸಾಮರ್ಥ್ಯಗಳನ್ನು ಅನಾವರಣಗೊಳಿಸಿದ್ದು ಅಮೆರಿಕ ಮತ್ತದರ ಮಿತ್ರರಿಗೆ ಸ್ಪಷ್ಟ ಸಂದೇಶ ರವಾನಿಸುವ ಗುರಿ ಹೊಂದಿದೆ. ಪರೇಡ್ ನಲ್ಲಿ ಗಮನ ಸೆಳೆದ ಆಧುನಿಕ ಶಸ್ತ್ರಾಸ್ತ್ರಗಳಲ್ಲಿ ಡಾಂಗ್ ಫೆಂಗ್-5ಸಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಮುಖವಾಗಿದೆ. ಭೂಗತ ನೆಲೆಗಳಿಂದ ಉಡಾಯಿಸುವ, ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಈ ಕ್ಷಿಪಣಿಗಳು 13,000 ಕಿ.ಮೀಗೂ ಅಧಿಕ ದೂರದ ವ್ಯಾಪ್ತಿ ಹೊಂದಿದ್ದು ಅಮೆರಿಕ ಮತ್ತು ಯುರೋಪ್ ಖಂಡಗಳನ್ನು ಸುಲಭವಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಇದು ಸುಮಾರು 4 ಮೆಗಾಟನ್ ಗಳಷ್ಟು ಸಿಡಿತಲೆಗಳನ್ನು(ಹಿರೋಷಿಮಾದ ಮೇಲೆ ಹಾಕಿದ್ದ ಅಣುಬಾಂಬಿಗಿಂತ 200 ಪಟ್ಟು ಶಕ್ತಿಶಾಲಿ) ಹೊತ್ತೊಯ್ಯಲಿದೆ ಎಂದು ವಿಶ್ಲೇಷಿಸಲಾಗಿದೆ.







