ಅಮೆರಿಕದ ರಶ್ಯ ನಿರ್ಬಂಧಗಳ ಮಸೂದೆಗೆ ಚೀನಾ ವಿರೋಧ

Photo Credit : AP
ಬೀಜಿಂಗ್: ಚೀನಾ ಮತ್ತು ಇತರ ದೇಶಗಳ ನಡುವಿನ ಆರ್ಥಿಕ ಹಾಗೂ ವಾಣಿಜ್ಯ ಸಹಕಾರವು ಯಾವುದೇ ಮೂರನೇ ವ್ಯಕ್ತಿಯ ಅಥವಾ ದೇಶದ ಒತ್ತಡ ಮತ್ತು ಬೆದರಿಕೆಯಿಂದ ಮುಕ್ತವಾಗಿರಬೇಕು ಎಂದು ಪ್ರತಿಪಾದಿಸಿರುವ ಚೀನಾ, ಇರಾನ್ ಮತ್ತು ರಶ್ಯ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವ ಅಮೆರಿಕದ ಮಸೂದೆಯನ್ನು ಗುರುವಾರ ವಿರೋಧಿಸಿದೆ.
ಅಂತರ್ರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವಿಲ್ಲದ ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅನುಮೋದನೆ ಇಲ್ಲದ ಏಕಪಕ್ಷೀಯ ನಿರ್ಬಂಧಗಳನ್ನು ಬೀಜಿಂಗ್ ವಿರೋಧಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.
ರಶ್ಯದಿಂದ ತೈಲ ಮತ್ತು ಅನಿಲವನ್ನು ಖರೀದಿಸುವ ದೇಶಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವ ಉದ್ದೇಶದಿಂದ ಅಮೆರಿಕದ ಸಂಸತ್ತು ಬುಧವಾರ ಮಸೂದೆಯನ್ನು ಅಂಗೀಕರಿಸಿದೆ. ಭಾರತ ಮತ್ತು ಚೀನಾ ರಷ್ಯಾದ ಕಚ್ಚಾ ತೈಲದ ಅತಿ ದೊಡ್ಡ ಖರೀದಿದಾರರಲ್ಲಿ ಸೇರಿವೆ.
ಶಾಂತಿ ಮಾತುಕತೆಯ ಮೇಲೆ ಗಂಭೀರ ಪರಿಣಾಮ: ರಶ್ಯ ಎಚ್ಚರಿಕೆ
ಮಾಸ್ಕೊ ಅಮೆರಿಕದ ಹೊಸ ನಿರ್ಬಂಧಗಳು ಉಕ್ರೇನ್ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವುದನ್ನು ಮತ್ತಷ್ಟು ಕಠಿಣಗೊಳಿಸಲಿದೆ ಎಂದು ರಶ್ಯ ಗುರುವಾರ ಎಚ್ಚರಿಸಿದೆ.
ಅಮೆರಿಕದ ಈ ನಿರ್ಧಾರವು ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ನಡೆಯುತ್ತಿರುವ ಸಂಧಾನ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನಾವು ಈ ವಿಧೇಯಕದ ಪ್ರಗತಿಯನ್ನು ಗಮನಿಸುತ್ತಿದ್ದೇವೆ. ಇದು ಸ್ನೇಹಪರವಲ್ಲದ ನಡಾವಳಿಯಾಗಿದೆ. ಅಮೆರಿಕ ವಿಧಿಸುವ ಯಾವುದೇ ಹೆಚ್ಚುವರಿ ನಿರ್ಬಂಧಗಳು ಉಕ್ರೇನ್ನಲ್ಲಿ ಶಾಂತಿ ಒಪ್ಪಂದವನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ಖಂಡಿತವಾಗಿಯೂ ಮತ್ತಷ್ಟು ಜಟಿಲಗೊಳಿಸುತ್ತವೆ' ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.






