ಅಮೆರಿಕದ ಹೊಸ ಸುಂಕಗಳಿಗೆ ಪ್ರತಿಯಾಗಿ ‘ಅಗತ್ಯ ಕ್ರಮ’ದ ಹಕ್ಕನ್ನು ಕಾಯ್ದಿರಿಸಲಾಗಿದೆ: ಚೀನಾ

Photo Credit : PTI
ಬೀಜಿಂಗ್, ನ. 26: ಹೊಸ ಸುಂಕಗಳನ್ನು ಅಮೆರಿಕ ಅನಾವರಣಗೊಳಿಸಿದ ಬಳಿಕ ‘ಅಗತ್ಯ ಕ್ರಮಗಳನ್ನು’ ಕೈಗೊಳ್ಳುವ ಹಕ್ಕನ್ನು ತಾನು ಕಾಯ್ದಿರಿಸಿಕೊಂಡಿರುವುದಾಗಿ ಚೀನಾ ಗುರುವಾರ ಹೇಳಿದೆ.
ಸುಂಕಗಳನ್ನು ವಿಧಿಸಲು ‘ಅತಿಯಾದ ಉತ್ಪಾದನಾ ಸಾಮರ್ಥ್ಯ’ವನ್ನು ಕಾರಣವಾಗಿ ಉಲ್ಲೇಖಿಸುವುದು ರಕ್ಷಣಾವಾದದ ಒಂದು ನೆಪವಾಗಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಹೆ ಯಾಡಾಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಇಂತಹ ಕ್ರಮಗಳು ರಚನಾತ್ಮಕ ಅಸಮತೋಲನವನ್ನು ಪರಿಹರಿಸುವಲ್ಲಿ ವಿಫಲವಾಗುವುದಷ್ಟೇ ಅಲ್ಲದೆ, ಜಾಗತಿಕ ಕೈಗಾರಿಕಾ ಮತ್ತು ಪೂರೈಕೆ ಸರಪಳಿಗಳ ಸುರಕ್ಷತೆ ಹಾಗೂ ಸ್ಥಿರತೆಗೆ ಧಕ್ಕೆ ಉಂಟುಮಾಡುತ್ತವೆ. ಕೈಗಾರಿಕಾ ಸಹಕಾರಕ್ಕೆ ತಡೆಯೊಡ್ಡುತ್ತವೆ, ಜಾಗತಿಕ ಹಣದುಬ್ಬರವನ್ನು ಹೆಚ್ಚಿಸುತ್ತವೆ, ಉದ್ಯಮಗಳು ಮತ್ತು ಗ್ರಾಹಕರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತವೆ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗೆ ದೀರ್ಘಕಾಲೀನ ವ್ಯವಸ್ಥಿತ ಅಪಾಯಗಳನ್ನು ಸೃಷ್ಟಿಸುತ್ತವೆ’ ಎಂದು ಯಾಡಾಂಗ್ ಹೇಳಿದರು.
‘ಅಮೆರಿಕ ತನ್ನ ತಪ್ಪು ನಡೆಗಳನ್ನು ಸರಿಪಡಿಸಿಕೊಳ್ಳಬೇಕು ಮತ್ತು ಮಾತುಕತೆ ಹಾಗೂ ಸಮಾಲೋಚನೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಸರಿಯಾದ ಹಾದಿಗೆ ಮರಳಬೇಕು. ಚೀನಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಿದೆ. ತನ್ನ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.
ಅನ್ಯಾಯದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿವೆ ಎಂಬ ಆರೋಪದ ಮೇಲೆ ಚೀನಾ, ಯುರೋಪಿಯನ್ ಯೂನಿಯನ್, ಭಾರತ, ಬಾಂಗ್ಲಾದೇಶ, ಕಾಂಬೋಡಿಯಾ, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಸಿಂಗಾಪುರ, ಸ್ವಿಟ್ಜರ್ಲ್ಯಾಂಡ್, ತೈವಾನ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿದಂತೆ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಪ್ರಸ್ತಾವನೆಯನ್ನು ಅಮೆರಿಕ ಬುಧವಾರ ಅನಾವರಣಗೊಳಿಸಿದೆ.
ಅತ್ಯಧಿಕ ಶೇ. 20ರಷ್ಟು ಸುಂಕವನ್ನು ಎದುರಿಸಲಿರುವ ದೇಶಗಳಲ್ಲಿ ಚೀನಾ ಕೂಡ ಒಂದಾಗಿದೆ. ಆದರೆ, ಈ ಹೊಸ ಸುಂಕ ಪ್ರಸ್ತಾವನೆಗಳು ಚೀನಾದೊಂದಿಗಿನ ಪ್ರಸ್ತುತ ವ್ಯಾಪಾರ ಮಾತುಕತೆಗಳ ವ್ಯಾಪ್ತಿಯೊಳಗೇ ಇವೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಹೇಳಿದ್ದಾರೆ.






