ವಹಿವಾಟು ಕೊರತೆ: ಭಾರತಕ್ಕೆ ಚೀನಾ ನೆರವಿನ ಭರವಸೆ

ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ | PC : PTI
ಹೊಸದಿಲ್ಲಿ: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರ ಮುಂದುವರಿದಿರುವ ನಡುವೆಯೇ ಭಾರತದ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟು ಕೂಡಾ ಸಂಕಷ್ಟಕ್ಕೆ ಸಿಲುಕಿದೆ. ಈ ವಾರ ಭಾರತದ ವಹಿವಾಟು ಕೊರತೆ ದಾಖಲೆ 99.2 ಶತಕೋಟಿ ಡಾಲರ್ ತಲುಪಿದ್ದು, ಭಾರತದಿಂದ ಪ್ರಿಮಿಯಂ ಸರಕುಗಳನ್ನು ಆಮದು ಮಾಡಿಕೊಳ್ಳಲು ಸಿದ್ಧ ಎಂದು ಚೀನಾ ಪ್ರಕಟಿಸಿದೆ. ಚೀನಾದ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಭಾರತಕ್ಕೆ ನೆರವಾಗಲು ಸಿದ್ಧ ಎಂದು ಘೋಷಿಸಿದೆ.
ಭಾರತದಲ್ಲಿ ಚೀನಾ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಕ್ಸು ಫೀಹಾಂಗ್ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಭಾರತದಲ್ಲಿ ಪಾರದರ್ಶಕ ಮತ್ತು ತಾರತಮ್ಯ ರಹಿತ ವಹಿವಾಟು ವಾತಾವರಣವನ್ನು ಚೀನಾ ಕಂಪನಿಗಳು ನಿರೀಕ್ಷಿಸುತ್ತವೆ ಎಂದು ಅವರು ಹೇಳಿದ್ದಾರೆ.
ಪೈಪೋಟಿ ಎಂದೂ ಸಂಘರ್ಷವಾಗಿ ಬೆಳೆಯಲು ಅವಕಾಶ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡಿದ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಅವರು, ಸ್ಥಿರ ಹಾಗೂ ಪರಸ್ಪರ ಸಹಕಾರದ ಸಂಬಂಧಕ್ಕೆ ಮಾತುಕತೆಗಳು ಅಗತ್ಯ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಎಸ್ಸಿಓ ಶೃಂಗದಲ್ಲಿ ಭಾಗವಹಿಸಲಿರುವ ಭಾರತದ ಪ್ರಧಾನಿಯನ್ನು ಚೀನಾ ಆತ್ಮೀಯವಾಗಿ ಸ್ವಾಗತಿಸಲು ಸಿದ್ಧ ಎಂದು ಬಣ್ಣಿಸಿದರು.
ಅಮೆರಿಕದ ಪ್ರತಿ ಸುಂಕದ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲ ಬಗೆಯ ಏಕಪಕ್ಷೀಯತೆ ಮತ್ತು ಸಂರಕ್ಷಣಾನೀತಿಯನ್ನು ವಿರೋಧಿಸುವ ಹೊಣೆ ಚೀನಾ ಮತ್ತು ಭಾರತಕ್ಕೆ ಸಮಾನವಾಗಿ ಇದೆ ಎಂದು ಹೇಳಿದರು.
ಪರಸ್ಪರ ಲಾಭ ಮತ್ತು ವಿನ್-ವಿನ್ ಸಹಕಾರ ಭಾರತ ಹಾಗೂ ಚೀನಾದ ಆರ್ಥಿಕ ಮತ್ತು ವ್ಯಾಪಾರ ಸಂಬಂಧದ ಮೂಲ ತಿರುಳು. ಚೀನಾ ಎಂದಿಗೂ ವ್ಯಾಪಾರ ಮಿಗತೆಯನ್ನು ಉದ್ದೇಶಪೂರ್ವಕವಾಗಿ ಯೋಚಿಸಿಲ್ಲ. ಮಾರುಕಟ್ಟೆ ಚಾಲೊಇತ ಕ್ಷಮತೆ ಮತ್ತು ಬದಲಾಗುತ್ತಿರುವ ಆರ್ಥಿಕ ಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ. ಅಂತರರಾಷ್ಟ್ರೀಯ ಉದ್ಯಮಿಗಳ ಜತೆ ಕಳೆದ ತಿಂಗಳು ಮಾತನಾಡಿದ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್ ಅವರು, ವಿಶ್ವದ ಅತಿದೊಡ್ಡ ಗ್ರಾಹಕ ಮಾರುಕಟ್ಟೆ ಮತ್ತು ಮಧ್ಯಮ ಆದಾಯದ ಗುಂಪು ಹೊಂದಿರುವ ಚೀನಾದಲ್ಲಿ ಹೂಡಿಕೆಗೆ ಇರುವ ವಿಪುಲ ಅವಕಾಶವನ್ನು ಬಿಂಬಿಸಿದ್ದಾರೆ ಎಂದು ವಿವರಿಸಿದರು.







