ಯುರೋಪಿಯನ್ ಯೂನಿಯನ್ `ಮೇಡ್ ಇನ್ ಯುರೋಪ್' ಯೋಜನೆ ಜಾರಿಗೊಳಿಸಿದರೆ ಪ್ರತಿಕ್ರಮ: ಚೀನಾ

ಬೀಜಿಂಗ್, ಎ.27: ಚೀನಾದ ತೀವ್ರ ಸ್ಪರ್ಧೆಯ ವಿರುದ್ಧ ಯುರೋಪಿಯನ್ ಯೂನಿಯನ್(ಇಯು) ಬಣದ ಕೈಗಾರಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಇಯು ಯೋಜನೆಯನ್ನು ಚೀನಾ ಸೋಮವಾರ ಖಂಡಿಸಿದ್ದು ಅದು ಜಾರಿಗೆ ಬಂದರೆ ಪ್ರತಿಕ್ರಮದ ಪ್ರತಿಜ್ಞೆ ಮಾಡಿದೆ.
ಕಾರುಗಳು, ಹಸಿರು ತಂತ್ರಜ್ಞಾನ ಮತ್ತು ಉಕ್ಕು ಸೇರಿದಂತೆ ಕಾರ್ಯತಂತ್ರದ ವಲಯಗಳಲ್ಲಿ ಸಾರ್ವಜನಿಕ ನಿಧಿಗಳ ಅವಕಾಶಗಳನ್ನು ಬಳಸಲು ಪ್ರಯತ್ನಿಸುತ್ತಿರುವ ಕಂಪೆನಿಗಳಿಗೆ ಹೊಸ `ಮೇಡ್ ಇನ್ ಯುರೋಪ್' ನಿಯಮಗಳನ್ನು ಇಯು ಮಾರ್ಚ್‍ನಲ್ಲಿ ಅನಾವರಣಗೊಳಿಸಿತು. ಈ ಪ್ರಸ್ತಾಪವು ತನ್ನ ಸ್ಪರ್ಧಾತ್ಮಕ ಪ್ರಯೋಜನಗಳನ್ನು ಮರಳಿ ಪಡೆಯಲು, ಕೈಗಾರಿಕಾ ಕುಸಿತಗಳನ್ನು ಕಡಿಮೆ ಮಾಡಲು ಮತ್ತು ಉದ್ಯೋಗ ನಷ್ಟಗಳನ್ನು ತಡೆಯುವ ಯುರೋಪಿಯನ್ ಯೂನಿಯನ್‍ನ ಮಹತ್ವಾಕಾಂಕ್ಷೆಯ ಪ್ರಮುಖ ಭಾಗವಾಗಿದೆ.
ಇದನ್ನು ತೀವ್ರವಾಗಿ ಆಕ್ಷೇಪಿಸಿರುವ ಚೀನಾದ ವಿದೇಶಾಂಗ ಇಲಾಖೆ ` ಈ ಕಾನೂನನ್ನು ಮುಂದಿಟ್ಟುಕೊಂಡು ಯುರೋಪಿಯನ್ ಯೂನಿಯನ್ ಚೀನಾದ ಕಂಪೆನಿಗಳ ಹಿತಾಸಕ್ತಿಗೆ ಹಾನಿಯುಂಟು ಮಾಡಿದರೆ ಚೀನಾವು ತನ್ನ ಉದ್ಯಮಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸಲು ಸೂಕ್ತ ಪ್ರತಿಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ' ಎಂದು ಸೋಮವಾರ ಪ್ರತಿಕ್ರಿಯಿಸಿದೆ.




