ತಾಂತ್ರಿಕ `ದಿಗ್ಬಂಧನ'ವನ್ನು ಸಮರ್ಥಿಸಿಕೊಳ್ಳಲು ಅಮೆರಿಕದಿಂದ ಗೂಢಚರ್ಯೆ ಆರೋಪ: ಚೀನಾ

ಜೆನ್ಸನ್ ಹುವಾಂಗ್ | Photo Credit : X
ಬೀಜಿಂಗ್: ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಢಚರ್ಯೆ ಸಂಚಿಗೆ ಗುರಿಯಾಗಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ಚೀನಾದ ಮೇಲೆ ತಾಂತ್ರಿಕ ದಿಗ್ಬಂಧನ ಹೇರಲು ಅಮೆರಿಕವು ಸುಳ್ಳು ಗೂಢಚರ್ಯೆ ಆರೋಪಗಳನ್ನು ಒಂದು ನೆಪವಾಗಿ ಬಳಸಿಕೊಳ್ಳುತ್ತಿದೆ ಎಂದು ಬೀಜಿಂಗ್ ಗುರುವಾರ ಆರೋಪಿಸಿದೆ.
ಚೀನಾದ ತಾಂತ್ರಿಕ ಪ್ರಗತಿಯು ಸ್ವತಂತ್ರ ಆವಿಷ್ಕಾರ ಮತ್ತು ಮುಕ್ತ ಸಹಕಾರದಿಂದ ಮುನ್ನಡೆಯುತ್ತಿದೆ. ತಾಂತ್ರಿಕ ದಿಗ್ಬಂಧನ ಹೇರುವ ನೆಪಕ್ಕಾಗಿ ಇಂತಹ `ಗೂಢಚರ್ಯೆ' ಕಥೆಗಳನ್ನು ಸೃಷ್ಟಿಸುವುದನ್ನು ಅಮೆರಿಕ ನಿಲ್ಲಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎನ್ವಿಡಿಯಾದ ಸಹ ಸಂಸ್ಥಾಪಕರಾಗಿ, ಅದನ್ನು ಕೃತಕ ಬುದ್ಧಿಮತ್ತೆಗೆ (ಎಐ) ಶಕ್ತಿ ನೀಡುವ ಚಿಪ್ಗಳ ವಿಶ್ವದ ಪ್ರಮುಖ ಪೂರೈಕೆದಾರ ಕಂಪೆನಿಯನ್ನಾಗಿ ಬೆಳೆಸಿದ ಹುವಾಂಗ್, ಆಲಿಸ್ ಹುವಾಂಗ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಆಲಿಸ್ ಅವರು ಸಿಂಗಾಪುರ ಮೂಲದ `ಮೆಗಾಸ್ಪೀಡ್' ಕಂಪೆನಿಯ ಮಾಜಿ ಕಾರ್ಯನಿರ್ವಾಹಕರಾಗಿದ್ದು, ಚೀನಾದ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಶಂಕಿಸಿದ್ದಾರೆ.




