ಅಮೆರಿಕದ ಹಸ್ತಕ್ಷೇಪದ ಹೊರತಾಗಿಯೂ ದ್ವಿಪಕ್ಷೀಯ ಸಂಬಂಧ ಸ್ಥಿರ: ಚೀನಾ

PC : PTI
ಬೀಜಿಂಗ್: ಚೀನಾದ ಹಿತಾಸಕ್ತಿಗೆ ಹಾನಿಯುಂಟು ಮಾಡುವ ಅಮೆರಿಕದ ಕ್ರಮಗಳ ಹೊರತಾಗಿಯೂ ಚೀನಾ-ಅಮೆರಿಕ ನಡುವಿನ ಸಂಬಂಧಗಳು ಸ್ಥಿರವಾಗಿವೆ ಎಂದು ಚೀನಾ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ಸಂಬಂಧಗಳು ಸ್ಥಿರವಾಗಿರಬೇಕು ಮತ್ತು ಸುಸ್ಥಿರ ಹಾದಿಯಲ್ಲಿ ಮುನ್ನಡೆಯಬೇಕು. ಚೀನಾಕ್ಕೆ ಭೇಟಿ ನೀಡಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಜತೆಗಿನ ಸಭೆಯಲ್ಲಿನ ಅಜೆಂಡಾದಲ್ಲಿ ಈ ವಿಷಯವೂ ಸೇರಲಿದೆ. ಚೀನಾದ ಹಿತಾಸಕ್ತಿ ಮತ್ತು ಅದರ ಪ್ರಮುಖ ನಿಲುವಿನ ವಿಷಯದಲ್ಲಿ ರಾಜಿಯಿಲ್ಲ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಕ್ಸಿನ್ಹುವಾ' ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಚೀನಾವನ್ನು ನಿಗ್ರಹಿಸುವ ಕಾರ್ಯತಂತ್ರವನ್ನು ಅಮೆರಿಕ ಮೊಂಡುತನದಿಂದ ಉತ್ತೇಜಿಸುತ್ತಾ ಬಂದಿದೆ, ಚೀನಾದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವ, ಚೀನಾದ ಪ್ರತಿಷ್ಟೆಗೆ ಮಸಿ ಬಳಿಯುವ ಮತ್ತು ಚೀನಾದ ಹಿತಾಸಕ್ತಿಗೆ ಹಾನಿ ಎಸಗುವ ತಪ್ಪಾದ ಪದಗಳು ಮತ್ತು ಕ್ರಮಗಳನ್ನು ನಿರಂತರ ಅನುಸರಿಸುತ್ತಾ ಬಂದಿದೆ ಎಂದು ವರದಿ ಹೇಳಿದೆ. ಬ್ಲಿಂಕೆನ್ ಭೇಟಿಯ ಸಂದರ್ಭ ಚೀನಾವು ತಿಳುವಳಿಕೆ ಮತ್ತು ಸಂವಾದವನ್ನು ಬಲಪಡಿಸುವುದು, ಭಿನ್ನಾಭಿಪ್ರಾಯಗಳನ್ನು ನಿರ್ವಹಿಸುವುದು ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರ ಮತ್ತು ಹಂಚಿಕೆಯ ಜವಾಬ್ದಾರಿಗಳನ್ನು ಉತ್ತೇಜಿಸುವತ್ತ ಗಮನ ಹರಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.







