ಚೀನಾ- ಅಮೆರಿಕ ವ್ಯಾಪಾರ ಒಪ್ಪಂದ ಸನ್ನಿಹಿತ; ಶೇಕಡ 100 ಸುಂಕ ರದ್ದು?

PC: x.com/DailyAlertHQ
ಬೀಜಿಂಗ್: ಅಮೆರಿಕದ ಜತೆ ಸಂಭಾವ್ಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ "ಮೂಲ ಒಮ್ಮತ" ಏರ್ಪಟ್ಟಿದೆ ಎಂದು ಚೀನಾ ಪ್ರಕಟಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿ ಮಾಡುವ ಎರಡು ದಿನ ಮೊದಲು ಈ ಹೇಳಿಕೆ ಹೊರಬಿದ್ದಿದೆ.
ಚೀನಾದ ಉಪಪ್ರಧಾನಿ ಹೇ ಲಿಫೆಂಗ್ ಮತ್ತು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ನೇತೃತ್ವದ ನಿಯೋಗದ ನಡುವೆ ಕೌಲಾಲಂಪುರದ ಏಸಿಯಾನಾ ಶೃಂಗಸಭೆಯ ವೇಳೆ ನಡೆದ ಮಾತುಕತೆಯ ವೇಳೆ ವ್ಯಾಪಾರ ಒಪ್ಪಂದದ ಮೂಲ ಅಂಶಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ಕೂಡಾ ಈ ಸಂದರ್ಭ ಉಪಸ್ಥಿತರಿದ್ದರು.
"ಬಿಚ್ಚುಮನಸ್ಸಿನ, ಆಳವಾದ ಮತ್ತು ರಚನಾತ್ಮಕ" ಚರ್ಚೆ ನಡೆದಿದೆ ಎಂದು ಲಿಫೆಂಗ್ ಬಣ್ಣಿಸಿದ್ದಾರೆ. ಸುಂಕ, ರಫ್ತು ನಿಯಂತ್ರಣ, ವ್ಯಾಪಾರ ಮತ್ತು ಕೃಷಿ ಉತ್ಪನ್ನಗಳು, ಫೆಂಟನಿಲ್ ಸಂಬಂಧಿ ಜಾರಿ ಅಂಶಗಳಲ್ಲಿ ಸಹಕಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಲಿಫೆಂಗ್ ವಿವರಿಸಿದ್ದಾರೆ.
ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧದ ಮೂಲ ಅಂಶ ಪರಸ್ಪರ ಲಾಭ ಮತ್ತು ಉಭಯ ತಂಡಗಳು ಗೆಲುವು ಸಾಧಿಸುವಂಥ ಫಲಿತಾಂಶಗಳು. ಸಹಕಾರದಿಂದ ಉಭಯ ದೇಶಗಳಿಗೆ ಲಾಭವಾಗಲಿದೆ ಹಾಗೂ ಸಂಘರ್ಷದಿಂದ ನಷ್ಟವಾಗಲಿದೆ ಎಂದು ಅವರು ಹೇಳಿದರು.
ಈ ಮಾತುಕತೆಯ ಬಳಿಕ ಹೇಳಿಕೆ ನೀಡಿದ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು, ಚೀನಾ ಸರಕು ಮೇಲೆ ಶೇಕಡ 100ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಟ್ರಂಪ್ ಬೆದರಿಕೆ ಇದೀಗ ಹುಸಿಯಾಗಿದೆ ಎಂದು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಮತ್ತು ರಕ್ಷಣಾ ಕ್ಷೇತ್ರದ ಕೈಗಾರಿಕೆಗಳಿಗೆ ಅಗತ್ಯವಾದ ರೇರ್ ಅರ್ಥ್ ಮೆಟೀರಿಯಲ್ ರಫ್ತಿನ ಮೇಲೆ ಚೀನಾ ರಫ್ತು ನಿಯಂತ್ರಣ ಕ್ರಮವನ್ನು ಘೋಷಿಸಿದ ಬೆನ್ನಲ್ಲೇ ಟ್ರಂಪ್ ಶೇಕಡ 100ರ ಹೆಚ್ಚುವರಿ ಸುಂಕದ ಬೆದರಿಕೆ ಹಾಕಿದ್ದರು.







