ಬಲ ಪ್ರಯೋಗ ವಿರುದ್ಧ ಅಮೆರಿಕಕ್ಕೆ ಚೀನಾ ಎಚ್ಚರಿಕೆ

ಕ್ಸಿ ಜಿಂಪಿಂಗ್ , ಡೊನಾಲ್ಡ್ ಟ್ರಂಪ್ | PC : PTI
ಬೀಜಿಂಗ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವುದನ್ನು ಖಂಡಿಸಿರುವ ಚೀನಾ, ಬಲಪ್ರಯೋಗದ ವಿರುದ್ಧ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಉಲ್ಬಣಿಸಿರುವಂತೆಯೇ, ಇರಾನ್ ವಿರುದ್ಧ ದಾಳಿ ನಡೆಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರು.
ಅಮೆರಿಕದಿಂದ ಯಾವುದೇ ಬಲದ ಬಳಕೆಯು ಇರಾನಿನ ಸಾರ್ವಭೌಮತ್ವ ಮತ್ತು ಭದ್ರತೆಯ ಉಲ್ಲಂಘನೆಯಾಗಿದೆ. ಇತರ ದೇಶಗಳ ಸಾರ್ವಭೌಮತೆ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಇಂತಹ ಯಾವುದೇ ಕೆಲಸವನ್ನು ಚೀನಾ ವಿರೋಧಿಸುತ್ತದೆ. ಮತ್ತು ಅಂತರಾಷ್ಟ್ರೀಯ ಸಂಬಂಧದಲ್ಲಿ ಬಲದ ಬಳಕೆ ಅಥವಾ ಬೆದರಿಕೆಯನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಗುವೊ ಜಿಯಾಕುನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಇರಾನ್ ವಿರುದ್ಧ ಇಸ್ರೇಲ್ನ ಮಿಲಿಟರಿ ದಾಳಿಯಿಂದ ತೀವ್ರ ಕಳವಳಗೊಂಡಿರುವುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಈ ವಾರದ ಆರಂಭದಲ್ಲಿ ಹೇಳಿದ್ದರು. ಸಂಘರ್ಷ ಉಲ್ಬಣಿಸುವುದನ್ನು ತಡೆಯಲು ಎಲ್ಲರೂ ಕ್ರಮ ಕೈಗೊಳ್ಳಬೇಕು. ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಲು ಚೀನಾ ಸಿದ್ಧವಿದೆ ಎಂದು ಜಿಂಪಿಂಗ್ ಹೇಳಿರುವುದಾಗಿ ವರದಿಯಾಗಿದೆ.





