ಬ್ರಿಕ್ಸ್ ಶೃಂಗಸಭೆಗೆ ಕ್ಸಿ ಜಿಂಪಿಂಗ್ ಗೈರು; ಚೀನಾದಲ್ಲಿ ಅಧಿಕಾರ ಬದಲಾವಣೆಯ ಸಾಧ್ಯತೆ?

ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ | PC : PTI
ಬ್ರಸೀಲಿಯಾ: ಬ್ರೆಝಿಲ್ ನ ರಿಯೊಡಿ ಜನೈರೋದಲ್ಲಿ ರವಿವಾರ ಆರಂಭಗೊಂಡಿರುವ ಬ್ರಿಕ್ಸ್ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಗೈರು ಹಾಜರಾಗಿರುವುದು ಚೀನಾದಲ್ಲಿ ಅಧಿಕಾರ ಬದಲಾವಣೆಯ ಸಾಧ್ಯತೆಯಿದೆ ಎಂಬ ವರದಿಗೆ ಪುಷ್ಟಿ ನೀಡಿದೆ.
ಜಿಂಪಿಂಗ್ 12 ವರ್ಷದಲ್ಲಿ ಇದೇ ಮೊದಲ ಬಾರಿಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಚೀನಾದ ಪ್ರೀಮಿಯರ್ ಲಿ ಕ್ವಿಯಾಂಗ್ ಚೀನಾದ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿದ್ದಾರೆ ಎಂದು ಚೀನಾದ ಕಮ್ಯುನಿಸ್ಟ್ ಪಕ್ಷದ ಹೇಳಿಕೆ ತಿಳಿಸಿದೆ. ಆಡಳಿತರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) 24 ಸದಸ್ಯರ ಪ್ರಬಲ ಪೊಲಿಟಿಕಲ್ ಬ್ಯೂರೋ ಜೂನ್ 30ರ ಸಭೆಯಲ್ಲಿ ಪಕ್ಷದ ಸಂಸ್ಥೆಗಳ ಕೆಲಸದ ಕುರಿತು ಹೊಸ ನಿಯಮಗಳನ್ನು ಪರಿಶೀಲಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೂ ಬ್ರಿಕ್ಸ್ ಶೃಂಗಸಭೆಗೆ ಗೈರು ಹಾಜರಾಗಿರುವುದಾಗಿ ರಶ್ಯದ ಮಾಧ್ಯಮಗಳು ವರದಿ ಮಾಡಿವೆ.