ಚೀನಾದ ಪ್ರತಿಕ್ರಮ: ಎರಡು ಇಯು ಬ್ಯಾಂಕ್ ಗಳ ವಿರುದ್ಧ ನಿರ್ಬಂಧ

ಸಾಂದರ್ಭಿಕ ಚಿತ್ರ | PC : NDTV
ಬೀಜಿಂಗ್, ಆ.14: ಯುರೋಪಿಯನ್ ಯೂನಿಯನ್ ನ(ಇಯು) ಎರಡು ಬ್ಯಾಂಕ್ ಗಳಾದ ಯುಎಬಿ ಉರ್ಬೊ ಬ್ಯಾಂಕರ್ಸ್ ಮತ್ತು ಎಬಿ ಮನೋ ಬ್ಯಾಂಕಸ್ ವಿರುದ್ಧ ನಿರ್ಬಂಧ ವಿಧಿಸಿಸಲಾಗಿದ್ದು ಇದು ಆಗಸ್ಟ್ 13ರಿಂದಲೇ ಜಾರಿಗೆ ಬಂದಿದೆ ಎಂದು ಚೀನಾದ ವಾಣಿಜ್ಯ ಇಲಾಖೆ ಘೋಷಿಸಿದೆ.
ಈ ಬ್ಯಾಂಕ್ ಗಳು ಚೀನಾದಲ್ಲಿ ಯಾವುದೇ ವಹಿವಾಟು ನಡೆಸುವುದನ್ನು ಅಥವಾ ಚೀನಾದಲ್ಲಿನ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಸಹಕರಿಸುವುದನ್ನು ನಿಷೇಧಿಸಲಾಗಿದೆ. ಯುರೋಪಿಯನ್ ಯೂನಿಯನ್ ಕೈಗೊಂಡ ಕ್ರಮಕ್ಕೆ ಚೀನಾದ ಪ್ರತಿಕ್ರಮ ಇದಾಗಿದೆ.
ರಶ್ಯಕ್ಕೆ ಸಂಬಂಧಿಸಿದ ಹಣಕಾಸು ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಿರುವ ಆರೋಪದಲ್ಲಿ ಚೀನಾದ ಎರಡು ಪ್ರಾದೇಶಿಕ ಬ್ಯಾಂಕ್ ಗಳಾದ ಹೆಯಿಹೆ ರೂರಲ್ ಕಮರ್ಷಿಯಲ್ ಬ್ಯಾಂಕ್ ಮತ್ತು ಸುಯಿಫೆನ್ಹೆ ರೂರಲ್ ಕಮರ್ಷಿಯಲ್ ಬ್ಯಾಂಕ್ ವಿರುದ್ಧ ಆಗಸ್ಟ್ 9ರಂದು ಯುರೋಪಿಯನ್ ಯೂನಿಯನ್ ನಿರ್ಬಂಧ ಜಾರಿಗೊಳಿಸಿತ್ತು. ಈ ಆರೋಪವನ್ನು ಚೀನಾ ತಿರಸ್ಕರಿಸಿತ್ತು ಮತ್ತು ಈ ಕ್ರಮವು ವ್ಯಾಪಾರ, ಆರ್ಥಿಕತೆ ಮತ್ತು ಹಣಕಾಸಿನ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಂಬಂಧಗಳಿಗೆ ಧಕ್ಕೆ ಉಂಟು ಮಾಡುವುದರಿಂದ ತಕ್ಷಣ ಮರು ಪರಿಶೀಲನೆಗೆ ಆಗ್ರಹಿಸಿತ್ತು.





