ತೈವಾನ್ ದ್ವೀಪದ ಸನಿಹಕ್ಕೆ ಬಂದ ಚೀನಾ ಯುದ್ಧವಿಮಾನ: ವರದಿ

ಸಾಂದರ್ಭಿಕ ಚಿತ್ರ| Photo: NDTV.com
ತೈಪೆ: ಚೀನಾ ವಾಯುಪಡೆಯ 8 ಯುದ್ಧವಿಮಾನಗಳು ಶನಿವಾರ ತೈವಾನ್ ಜಲಸಂಧಿಯ ಮಧ್ಯದ ಗೆರೆಯನ್ನು ದಾಟಿ ಮುನ್ನುಗ್ಗಿ ತೈವಾನ್ ನ ಕರಾವಳಿ ವ್ಯಾಪ್ತಿಯವರೆಗೆ ಬಂದಿದ್ದವು. ತೈವಾನ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಿಸಲು ಚೀನಾ ನಿರಂತರ ಪ್ರಯತ್ನಿಸುತ್ತಿರುವುದಕ್ಕೆ ಇದು ನಿದರ್ಶನವಾಗಿದೆ ಎಂದು ತೈವಾನ್ ವಿದೇಶಾಂಗ ಇಲಾಖೆ ಶನಿವಾರ ಹೇಳಿದೆ.
ತೈವಾನ್ ಕರಾವಳಿ ತೀರದಿಂದ 24 ನಾಟಿಕಲ್ ಮೈಲ್ ನಷ್ಟು ತನ್ನ ಕರಾವಳಿ ವ್ಯಾಪ್ತಿ ಎಂದು ತೈವಾನ್ ಪ್ರತಿಪಾದಿಸುತ್ತಿದೆ. ಆದರೆ ತೈವಾನ್ ದೇಶವೇ ಮೈನ್ಲ್ಯಾಂಡ್ ಚೀನಾದ ವ್ಯಾಪ್ತಿಗೆ ಬರುವ ಕಾರಣ ತೈವಾನ್ ಹೇಳಿಕೆಯನ್ನು ಮಾನ್ಯ ಮಾಡಲಾಗದು ಎಂದು ಚೀನಾದ ವಾದವಾಗಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಜೆ-10 ಮತ್ತು ಜೆ-16 ಫೈಟರ್ ಜೆಟ್ ಗಳ ಸಹಿತ ಚೀನಾದ 19 ಯುದ್ಧವಿಮಾನಗಳು ತೈವಾನ್ ಜಲಸಂಧಿಯ ಬಳಿ ಹಾರಾಟ ನಡೆಸುತ್ತಿರುವುದನ್ನು ಗಮನಿಸಲಾಗಿದೆ. ಅದರಲ್ಲಿ 8 ಯುದ್ಧವಿಮಾನಗಳು ಜಲಸಂಧಿಯ ಮಧ್ಯದ ಗೆರೆಯನ್ನು ದಾಟಿ ಒಳಬಂದು ತನ್ನ ಕರಾವಳಿ ವ್ಯಾಪ್ತಿಯ ಬಳಿ ಬಂದಿದೆ. ಇದನ್ನು ಗಮನಿಸಿ ನಮ್ಮ ಯುದ್ಧವಿಮಾನಗಳು ಹಾಗೂ ಯುದ್ಧನೌಕೆಯನ್ನು ಅತ್ತ ರವಾನಿಸಿದ ಜತೆಗೆ ಭೂಮಿಯಿಂದ ಕಾರ್ಯ ನಿರ್ವಹಿಸುವ ಕ್ಷಿಪಣಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ತೈವಾನ್ ರಕ್ಷಣಾ ಇಲಾಖೆ ಹೇಳಿದೆ.
ಈ ಮಧ್ಯೆ, ಚೀನಾ ಮಿಲಿಟರಿಯ ಪೂರ್ವ ವಿಭಾಗದ ತುಕಡಿಯು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಪ್ರಸಾರ ಮಾಡಿದ್ದು `ನಮ್ಮ ಜೆ-16 ಜೆಟ್ ಫೈಟರ್ಗಳು ಸಮುದ್ರವ್ಯಾಪ್ತಿಯ ಆಳದವರೆಗೆ ಹಾರಾಟ ನಡೆಸಿವೆ. ಇದು ದೀರ್ಘ ದೂರದ ಸಮರಾಭ್ಯಾಸವಾಗಿದೆ' ಎಂದು ಹೇಳಿದೆ.