ಸ್ಥಳವಿಲ್ಲದೇ ಫುಟ್ಭಾಲ್ ಮೈದಾನದಲ್ಲಿ ಮೃತದೇಹಗಳನ್ನು ಹೂಳುತ್ತಿರುವ ನಾಗರಿಕರು
ಗಾಝಾದಲ್ಲಿ ತುಂಬಿದೆ ಸಮಾಧಿಗಳು!

Photo- PTI
ಜೆರುಸೆಲೆಂ: ಇಸ್ರೇಲ್ ಹಾಗೂ ಹಮಾಸ್ ನಡುವೆ ತೀವ್ರ ಸ್ವರೂಪದ ಕದನ ನಡೆಯುತ್ತಿರುವ ಉತ್ತರ ಗಾಝಾದಲ್ಲಿನ ತನ್ನ ನಿವಾಸವನ್ನು ತೊರೆಯುವುದಕ್ಕೂ ಮುನ್ನ ಮಹ್ಮುದ್ ಅಲ್-ಮಸ್ರಿ ಅವರಿಗೆ ನೆರವೇರಿಸಬೇಕಾದ ಒಂದು ಕಠೋರ ಕೆಲಸವಿತ್ತು. ಸಮೀಪದಲ್ಲಿನ ಸಿಟ್ರಸ್ ಆರ್ಚರ್ಡ್ ನಲ್ಲಿ ತನ್ನ ಮೂವರು ಸಹೋದರರು ಹಾಗೂ ಅವರ ಐವರು ಮಕ್ಕಳನ್ನು ಸಮಾಧಿ ಮಾಡುವುದು.
ತನ್ನ ನಿವಾಸದ ಪ್ರದೇಶವು ಯುದ್ಧ ವಲಯವಾಗಿ ಮಾರ್ಪಟ್ಟಿದುದರಿಂದ 60 ವರ್ಷದ ಆ ದುಃಖಪೀಡಿತ ರೈತನಿಗೆ ತಾತ್ಕಾಲಿಕ ಸಮಾಧಿ ತೋಡಿ, ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದ ತನ್ನ ಸಂಬಂಧಿಕರ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ಮಾಡುವುದನ್ನು ಬಿಟ್ಟು ಮತ್ಯಾವ ದಾರಿಯೂ ಉಳಿದಿರಲಿಲ್ಲ.
“ನಾವು ಅವರನ್ನು ಹಣ್ಣಿನ ತೋಟದಲ್ಲಿ ಸಮಾಧಿ ಮಾಡಬೇಕಾಯಿತು. ಏಕೆಂದರೆ, ಸ್ಮಶಾನವು ಟ್ಯಾಂಕರ್ ಗಳು ಒಳ ಬರುತ್ತಿರುವ ಗಡಿ ವಲಯದಲ್ಲಿದೆ ಹಾಗೂ ಇದು ಬಹಳ ಅಪಾಯಕಾರಿಯಾಗಿದೆ” ಎಂದು ಮಸ್ರಿ ಹೇಳಿದ್ದಾರೆ.
“ಯುದ್ಧ ಮುಗಿದ ನಂತರ ನಾನು ಮೃತ ದೇಹಗಳನ್ನು ಸ್ಥಳಾಂತರಿಸುತ್ತೇನೆ” ಎಂದೂ ಅವರು ತಿಳಿಸಿದ್ದಾರೆ.
ಸದ್ಯ ತಮ್ಮ ಕುಟುಂಬದೊಂದಿಗೆ ದಕ್ಷಿಣ ಗಾಝಾದಲ್ಲಿನ ಆಸ್ಪತ್ರೆಯೊಂದರಲ್ಲಿ ಆಶ್ರಯ ಪಡೆದಿರುವ ಮಸ್ರಿ, ಇಸ್ರೇಲ್ ಗಡಿ ಬೇಲಿಗಿಂತ ತುಂಬಾ ದೂರವಿಲ್ಲದ ಅರೆ ಗ್ರಾಮೀಣ ಪ್ರದೇಶವಾದ ಉತ್ತರ ಗಾಝಾ ಪಟ್ಟಿಯಲ್ಲಿನ ಬೈಟ್ ಹನೌನ್ ನಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರು.
ಅಕ್ಟೋಬರ್ 7ರಂದು ಇಸ್ರೇಲ್ ಒಳ ಹೊಕ್ಕು ಹಮಾಸ್ ನಡೆಸಿದ ದಾಳಿಯಲ್ಲಿ 1,400 ಮಂದಿ ಮೃತಪಟ್ಟು, 240 ಮಂದಿಯನ್ನು ಒತ್ತೆಯಾಳುಗಳನ್ನಾಗಿಸಿಕೊಳ್ಳಲಾಗಿದೆ. ಮೃತಪಟ್ಟವರ ಪೈಕಿ ಬಹುತೇಕರು ನಾಗರಿಕರು ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದರು. ಇದರ ಬೆನ್ನಿಗೇ ಕದನವು ಸ್ಪೋಟಗೊಂಡಿತ್ತು. ಈ ಸಂದರ್ಭದಲ್ಲಿ ದಕ್ಷಿಣ ಗಾಝಾಗೆ ತೆರಳುವಂತೆ ಇಸ್ರೇಲ್ ನೀಡಿದ್ದ ಪ್ರಾಥಮಿಕ ಎಚ್ಚರಿಕೆಯನ್ನು ನಿರ್ಲಕ್ಷಿಸಲು ಮಸ್ರಿ ನಿರ್ಧರಿಸಿದ್ದರು.
ಆದರೆ, ಸತತ ಎರಡು ವಾರಗಳ ಕಾಲ ನಡೆದ ಭಾರೀ ಬಾಂಬ್ ದಾಳಿಯು ಅವರ ಮನಸ್ಸನ್ನು ಬದಲಿಸಿತ್ತು. ಕದನವು ತೀವ್ರ ಸ್ವರೂಪಕ್ಕೆ ತಿರುಗಿ, ದಿನದಿಂದ ದಿನಕ್ಕೆ ಭೂ ಆಕ್ರಮಣ ಹೆಚ್ಚಾಗುವ ಭೀತಿ ಮೂಡುತ್ತಿದ್ದಂತೆಯೆ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ತಮ್ಮ ನಿವಾಸವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದರು.
ಸದ್ಯ ಈ ಭೀಕರ ಯುದ್ಧ ಪ್ರಾರಂಭಗೊಂಡು ನಾಲ್ಕು ವಾರಗಳು ಕಳೆದಿದ್ದು, ಈ ಯುದ್ಧದಲ್ಲಿ ಇಲ್ಲಿಯವರೆಗೆ 10,500 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಗಾಝಾ ಮೇಲೆ ನಡೆದಿರುವ ಬಾಂಬ್ ದಾಳಿಯಲ್ಲಿ ಮತ್ತೆ ನಾಗರಿಕರೇ ಹೆಚ್ಚು ಮೃತಪಟ್ಟಿದ್ದಾರೆ ಎನ್ನುತ್ತದೆ ಹಮಾಸ್ ನೇತೃತ್ವದ ಆರೋಗ್ಯ ಸಚಿವಾಲಯ.
ನಾನು ಮತ್ತು ನನ್ನ ಕುಟುಂಬವು ಕಿಕ್ಕಿರಿದು ತುಂಬಿರುವ ದಕ್ಷಿಣ ಗಾಝಾದಲ್ಲಿನ ಆಸ್ಪತ್ರೆಯೊಂದರಲ್ಲಿ ಆಶ್ರಯ ಪಡೆದಿದ್ದೇವೆ ಎಂದು AFP ಸುದ್ದಿ ಸಂಸ್ಥೆಗೆ ಮಸ್ರಿ ತಿಳಿಸಿದ್ದಾರೆ.
ಈ ಭೀಕರ ಯುದ್ಧದಲ್ಲಿ ಗಾಝಾವು ಸಾಮೂಹಿಕ ಸಮಾಧಿಯಾಗಿ ಮಾರ್ಪಟ್ಟಿದ್ದು, ಮೃತ ದೇಹಗಳು ಆಸ್ಪತ್ರೆಗಳ ಹೊರಗೆ, ರಸ್ತೆಗಳ ಮೇಲೆ, ಉದ್ಯಾನವನಗಳಲ್ಲಿ, ಶೀತಲೀಕೃತ ಟ್ರಕ್ ಗಳಲ್ಲಿ ಹಾಗೂ ಮರು ಬಳಕೆಯ ಐಸ್ ಕ್ರೀಂ ವ್ಯಾನ್ ಗಳಲ್ಲಿಯೂ ರಾಶಿರಾಶಿಯಾಗಿ ಬಿದ್ದಿವೆ.
ಇಸ್ರೇಲ್ ದಾಳಿಯ ಕಾರಣಕ್ಕೆ ಬಹುತೇಕ ಸ್ಮಶಾನಗಳು ಭರ್ತಿಯಾಗಿವೆ ಅಥವಾ ಪ್ರವೇಶಿಸಲು ಅಸಾಧ್ಯವಾಗಿವೆ. ಸ್ಥಳವಿಲ್ಲದೇ ಫುಟ್ಬಾಲ್ ಮೈದಾನಗಳನ್ನು ಸ್ಮಶಾನಗಳನ್ನಾಗಿ ಮಾಡಲಾಗುತ್ತಿದೆ. ಅಲ್ಲಿಯೇ ಸತ್ತ ಹೆಣದ ರಾಶಿಗಳನ್ನು ಹೂಳುವ ಪರಿಸ್ಥಿತಿ ಬಂದಿದೆ. ಹೀಗಾಗಿ ಮೃತ ವ್ಯಕ್ತಿಗಳ ಕುಟುಂಬದ ಸದಸ್ಯರು ತಮ್ಮ ಪ್ರೀತಿ ಪಾತ್ರರನ್ನು ಸಮಾಧಿ ಮಾಡಲು ಸುಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿ ಬಂದಿದೆ.







