ಶ್ರೀಲಂಕಾ ಜೈಲಿನಲ್ಲಿ ಕೈದಿಗಳ ಗುಂಪುಗಳ ನಡುವೆ ಘರ್ಷಣೆ : ನಾಲ್ವರು ಸಿಬ್ಬಂದಿ ಸಹಿತ 25 ಮಂದಿ ಮೃತ್ಯು

Photo Credit : AP
ಕೊಲಂಬೋ, ಜು.6: ಶ್ರೀಲಂಕಾದ ಜೈಲೊಂದರಲ್ಲಿ ಸೋಮವಾರ ಎರಡು ಕೈದಿಗಳ ಗುಂಪುಗಳ ನಡುವೆ ಭುಗಿಲೆದ್ದ ಭೀಕರ ಸಂಘರ್ಷದಲ್ಲಿ ನಾಲ್ವರು ಕಾರಾಗೃಹದ ಕಾವಲುಗಾರರು ಸೇರಿ ಕನಿಷ್ಠ 25 ಜನರು ಮೃತಪಟ್ಟಿದ್ದಾರೆ ಮತ್ತು ಸುಮಾರು 100 ಜನರು ಗಾಯಗೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇದು ಕಳೆದ 5 ವರ್ಷಗಳಲ್ಲೇ ದೇಶದಲ್ಲಿ ನಡೆದ ಅತ್ಯಂತ ಭೀಕರ ಜೈಲು ದಂಗೆಯಾಗಿದೆ.
ಕರಾವಳಿ ನಗರವಾದ ನೆಗೊಂಬೊದ ಮುಖ್ಯ ಕಾರಾಗೃಹದಲ್ಲಿ ರವಿವಾರ ಈ ಗಲಭೆ ಆರಂಭವಾಗಿದ್ದು, ಶಿಕ್ಷೆಗೊಳಗಾದ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ರಾತ್ರಿಯಿಡೀ ಭೀಕರ ಕಾಳಗ ನಡೆದಿದ್ದು, ಹಿಂಸಾಚಾರವು ಜೈಲಿನಾದ್ಯಂತ ಹರಡುತ್ತಿದ್ದಂತೆ, ಪಕ್ಕದ ವಿಭಾಗದಲ್ಲಿದ್ದ ಮಹಿಳಾ ಕೈದಿಗಳು ರವಿವಾರ ರಾತ್ರಿ ತಮ್ಮ ಕಟ್ಟಡದ ಮೇಲ್ಛಾವಣಿಯನ್ನು ಹತ್ತಿ, ತಮ್ಮನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭ ಛಾವಣಿಯ ಒಂದು ಭಾಗ ಕುಸಿದು ಬಿದ್ದಿದ್ದರಿಂದ ಹಲವಾರು ಮಹಿಳಾ ಕೈದಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಜೈಲಿಗೆ ಪೊಲೀಸ್ ಕಮಾಂಡೋಗಳನ್ನು ಕಳುಹಿಸಲಾಯಿತಾದರೂ, ಅವರನ್ನು ಜೈಲಿನ ಒಳಗೆ ನಿಯೋಜಿಸಲಾಗಿರಲಿಲ್ಲ. ಇದೇ ವೇಳೆ, ಜೈಲಿನ ಹೊರಗೆ ಕೈದಿಗಳ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದಂಗೆಯನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ ನಾಲ್ಕು ಜೈಲು ಕಾವಲುಗಾರರು ಮೃತಪಟ್ಟಿದ್ದಾರೆ. ಪರಿಸ್ಥಿತಿ ಕೈಮೀರಿ ಹೋದಾಗ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಶ್ರೀಲಂಕಾ ವಾಯುಪಡೆಯು ಡ್ರೋನ್ಗಳು ಮತ್ತು ಹೆಲಿಕಾಪ್ಟರ್ ಅನ್ನು ಬಳಸಿತು ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ವರುಣ ಗಮಗೇ ತಿಳಿಸಿರುವುದಾಗಿ `ರಾಯ್ಟರ್ಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಯಗೊಂಡ ಕೈದಿಗಳ ಜೊತೆಗೆ ಜೈಲು ಸಿಬ್ಬಂದಿಯನ್ನು ಕೂಡ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆಲವು ಸಂತ್ರಸ್ತರು ಗುಂಡಿನ ಗಾಯಗಳಿಂದ ಬಳಲುತ್ತಿದ್ದರೆ, ಇನ್ನು ಕೆಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ನೆಗೊಂಬೋ ಆಸ್ಪತ್ರೆಯ ನಿರ್ದೇಶಕಿ ಪುಷ್ಪಾ ಗಮ್ಲತ್ ತಿಳಿಸಿದ್ದಾರೆ.






