POKಯಲ್ಲಿ ಭುಗಿಲೆದ್ದ ಹಿಂಸಾಚಾರ: 7 ಮೃತ್ಯು; 63 ಮಂದಿಗೆ ಗಾಯ

Photo Credit : timesofindia
ಮುಜಫರಾಬಾದ್, ಜೂ. 8: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK)ದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಒತ್ತಾಯಿಸಿ ‘ಜಾಯಿಂಟ್ ಆರ್ಮಿ ಆ್ಯಕ್ಷನ್ ಕಮಿಟಿ’ (JAAC) ಕಳೆದ ಕೆಲ ದಿನಗಳಿಂದ ಪ್ರದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ, ಪ್ರಾದೇಶಿಕ ಆಡಳಿತವು ಜೆಎಎಸಿಯನ್ನು ಭಯೋತ್ಪಾದನೆ-ವಿರೋಧಿ ಕಾನೂನುಗಳ ಅಡಿಯಲ್ಲಿ ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು. ಆದರೂ JAAC ತನ್ನ ಪ್ರತಿಭಟನೆ ಮುಂದುವರಿಸಿದ್ದು, ಮಂಗಳವಾರ (ಜೂ. 9) ಪ್ರದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.
ಸೋಮವಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಲು ಪೊಲೀಸರು ಮುಂದಾದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಭುಗಿಲೆದ್ದಿದೆ. ನಾಲ್ಕು ಮಂದಿ ಪೊಲೀಸರು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದು, 23 ಪೊಲೀಸರ ಸಹಿತ 63 ಮಂದಿ ಗಾಯಗೊಂಡಿರುವುದಾಗಿ ರಾವಲಕೋಟ್ ಕಮಿಷನರ್ ಸರ್ದಾರ್ ವಹೀದ್ ಅವರನ್ನು ಉಲ್ಲೇಖಿಸಿ AFP ಸುದ್ದಿಸಂಸ್ಥೆ ವರದಿ ಮಾಡಿದೆ.
ಪೊಲೀಸರ ಮೇಲೆ ಗುಂಡು ಹಾರಿಸಲಾಗಿದ್ದು, ಇದು ಭಯೋತ್ಪಾದಕ ಘಟನೆಯಾಗಿದೆ. ಘರ್ಷಣೆಗೆ ಸಂಬಂಧಿಸಿ JAACಯ 70ಕ್ಕೂ ಹೆಚ್ಚು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ‘ಡಾನ್’ ವರದಿ ಮಾಡಿದೆ.






