ʼಕೋಲ್ಡ್ ಪ್ಲೇ ಕಿಸ್ ಕ್ಯಾಮ್ʼ ಪ್ರಕರಣ: ಕ್ರಿಸ್ಟಿನ್ ಕೊಬೋಟ್ ರಾಜೀನಾಮೆ

PC: x.com/nypost
ಕಂಪನಿಯ ಮಾಜಿ ಸಿಇ ಆ್ಯಂಡಿ ಬೈರೊನ್ ಜತೆ ಕೋಲ್ಡ್ ಪ್ಲೇ ಕಿಸ್ ಕ್ಯಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ತಂತ್ರಜ್ಞಾನ ಸಂಸ್ಥೆ ಆಸ್ಟ್ರೋನೊಮರ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕ್ರಿಸ್ಟಿನ್ ಕೊಬೋಟ್ ಕಂಪನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬೈರೊನ್ ಈ ತಿಂಗಳ 19ರಂದು ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು.
ಕ್ರಿಸ್ಟಿನ್ ಕೊಬೋಟ್ ರಾಜೀನಾಮೆಯನ್ನು ಕಂಪನಿ ಮೂಲಗಳು ದೃಢಪಡಿಸಿವೆ. ಮೆಸೆಚುಸೆಟ್ಸ್ ನ ಬೋಸ್ಟನ್ ಬಳಿ ಜುಲೈ 16ರಂದು ನಡೆದ ಕೋಲ್ಡ್ ಪ್ಲೇ ಸಂಗೀತ ಕಾರ್ಯಕ್ರಮದಲ್ಲಿ ಕೊಬೋಟ್ ಹಾಗೂ ಬೈರೊನ್ ಅವರ ದೃಶ್ಯ ʼಕಿಸ್ ಕ್ಯಾಮ್ʼ ನಲ್ಲಿ ಸೆರೆಯಾಗಿತ್ತು. ಕ್ಯಾಮೆರಾ ಅವರ ಕಡೆಗೆ ಫೋಕಸ್ ಆಗಿರುವುದು ತಿಳಿದ ತಕ್ಷಣ ಅವರು ಅಡಗಿಕೊಳ್ಳಲು ಪ್ರಯತ್ನಿದ್ದರು. ಇದರಿಂದ ಇಬ್ಬರ ನಡುವೆ ಪ್ರೇಮಸಂಬಂಧ ಇದೆ ಎಂದು ಕೋಲ್ಡ್ ಪ್ಲೇ ಪ್ರಮುಖ ಗಾಯಕ ಕ್ರಿಸ್ ಮಾರ್ಟಿನ್ ಊಹಿಸಿದ್ದರು.
ಈ ಘಟನೆ ಬಳಿಕ ವಿಡಿಯೊ ವೈರಲ್ ಆಗಿತ್ತು. ಕಂಪನಿಯ ಬಗ್ಗೆ ಕೂಡಾ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆ ಆಗುತ್ತಿತ್ತು. ಕಂಪನಿಗೆ ಹಾನಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೈರೊನ್ ಜುಲೈ 19ರಂದು ರಾಜೀನಾಮೆ ನೀಡಿದ್ದು, ಆರಂಭಿಕ ತನಿಖೆ ಬಳಿಕ ಕಂಪನಿಯ ಆಡಳಿತ ಮಂಡಳಿ ರಾಜೀನಾಮೆ ಆಂಗೀಕರಿಸಿದೆ. ಕಂಪನಿಯ ಸಹ ಸಂಸ್ಥಾಪಕ ಪೀಟ್ ಡಿಜೋಯ್ ಹಂಗಾಮಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಕೊಬೋಟ್ ರಾಜೀನಾಮೆ ಬಗ್ಗೆ ಕಂಪನಿ ಇನ್ನೂ ಹೇಳಿಕೆ ನೀಡಿಲ್ಲ.





