ಕೋಟ್ಯಾಧೀಶರ ಪ್ರಮಾಣದಲ್ಲಿ ಕುಸಿತ: ವರದಿ

photo courtesy: freepik.com
ಜಿನೆವಾ : ಕಳೆದ ವರ್ಷ(2022ರಲ್ಲಿ) 3.5 ದಶಲಕ್ಷಕ್ಕೂ ಅಧಿಕ ಜನರು ತಮ್ಮ ಕೋಟ್ಯಾಧೀಶ ಸ್ಥಾನಮಾನವನ್ನು ಕಳೆದುಕೊಂಡಿದ್ದು 2008ರ ಆರ್ಥಿಕ ಬಿಕ್ಕಟ್ಟಿನ ನಂತರ ಜಾಗತಿಕ ಸಂಪತ್ತಿನ ಅತೀ ದೊಡ್ಡ ಕುಸಿತವಾಗಿದೆ ಎಂದು ಸ್ವಿಝರ್ಲ್ಯಾಂಡಿನ ಯುಬಿಎಸ್ ಬ್ಯಾಂಕ್ನ ವಾರ್ಷಿಕ ಸಂಪತ್ತು ವರದಿ ಹೇಳಿದೆ.
2021ರಲ್ಲಿ 62.9 ದಶಲಕ್ಷ ಮಂದಿ 1 ದಶಲಕ್ಷ ಡಾಲರ್ ಅಥವಾ ಅದಕ್ಕೂ ಹೆಚ್ಚು ಸಂಪತ್ತು ಹೊಂದಿದ್ದರೆ ಈ ಪ್ರಮಾಣ ಕಳೆದ ವರ್ಷಾಂತ್ಯಕ್ಕೆ 59.4 ದಶಲಕ್ಷಕ್ಕೆ ಕುಸಿದಿದೆ. ಅಮೆರಿಕದ ಕೋಟ್ಯಾಧಿಪತಿಗಳ ಪ್ರಮಾಣದಲ್ಲಿ 1.8 ದಶಲಕ್ಷ ಕಡಿಮೆಯಾಗಿ 22.7 ದಶಲಕ್ಷಕ್ಕೆ ತಲುಪಿದೆ. ಚೀನಾದಲ್ಲಿ 6.2 ದಶಲಕ್ಷ ಕೋಟ್ಯಾಧೀಶರು, ಬ್ರಿಟನ್ನಲ್ಲಿ 2.6 ದಶಲಕ್ಷ, ಜಪಾನ್ನಲ್ಲಿ 2.6 ದಶಲಕ್ಷ ಕೋಟ್ಯಾಧೀಶರಿದ್ದಾರೆ. ಈ ದೇಶಗಳಲ್ಲಿ ಕೋಟ್ಯಾಧೀಶರ ಸಂಖ್ಯೆ ಕುಸಿದರೆ, ಭಾರತ, ರಶ್ಯ, ಮೆಕ್ಸಿಕೋ ಮತ್ತು ಬ್ರೆಝಿಲ್ ದೇಶಗಳಲ್ಲಿ ಹೆಚ್ಚಿದೆ ಎಂದು ವರದಿ ಹೇಳಿದೆ.
ವರದಿಯು ಮುಂಬರುವ ವರ್ಷಕ್ಕೆ ಸಕಾರಾತ್ಮಕ ಪ್ರವೃತ್ತಿಯನ್ನು ಅಂದಾಜು ಮಾಡಿದ್ದು ಮುಂದಿನ 5 ವರ್ಷಗಳಲ್ಲಿ ಜಾಗತಿಕ ಸಂಪತ್ತು ಶೇ.38ರಷ್ಟು ಏರಿಕೆ ದಾಖಲಿಸಿ 2027ರ ವೇಳೆಗೆ 629 ಲಕ್ಷ ಕೋಟಿ ಡಾಲರ್ಗೆ ತಲುಪಲಿದೆ ಎಂದು ಹೇಳಿದೆ.