ಕೊಲಂಬಿಯಾ ಭೂಕಂಪ |ಮೃತರ ಸಂಖ್ಯೆ 265ಕ್ಕೆ ಏರಿಕೆ; ಅಂತಿಮ ಹಂತ ತಲುಪಿದ ರಕ್ಷಣಾ ಕಾರ್ಯಾಚರಣೆ

Photo credit: PTI
ಬೊಗೋಟಾ: ಸೋಮವಾರ ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ ಬದುಕುಳಿದಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಬುಧವಾರ ಅಂತಿಮ ಹಂತ ತಲುಪಿದೆ. ಈ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 265ಕ್ಕೆ ಏರಿಕೆಯಾಗಿದ್ದು, 3,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕುಸಿದು ಬಿದ್ದಿರುವ ಕಟ್ಟಡಗಳಡಿ ಸಿಲುಕಿಕೊಂಡಿರುವ ವ್ಯಕ್ತಿಗಳನ್ನು ರಕ್ಷಿಸಲು ಅತ್ಯಂತ ಉತ್ತಮ ಅವಕಾಶ ಎಂದು ಭಾವಿಸಲಾಗಿರುವ ಮಹತ್ವದ 72 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಘಟ್ಟವನ್ನು ತುರ್ತು ಪರಿಸ್ಥಿತಿ ತಂಡಗಳು ತಲುಪಿವೆ. ಈಗಲೂ ಸುಮಾರು 500 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದು, ಈ ಭೂಕಂಪನದಲ್ಲಿ 9,550ಕ್ಕೂ ಹೆಚ್ಚು ಮನೆಗಳು ನಾಶಗೊಂಡಿವೆ.
ಈ ಪ್ರಬಲ ಭೂಕಂಪದಲ್ಲಿ ಕೊಲಂಬಿಯಾದ ಕಾಫಿ ಬೆಳೆಯ ಹೃದಯ ಭಾಗ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಈ ಘಟನೆಯಲ್ಲಿ ಪೆರೈರಾದಲ್ಲಿ 83 ಸಾವುಗಳು ದಾಖಲಾಗಿದ್ದರೆ, ಕೊಲಂಬಿಯಾದ ಮೂರನೆಯ ಅತಿ ದೊಡ್ಡ ನಗರವಾದ ಕಾಲಿಯಲ್ಲಿ 74 ಸಾವುಗಳು ವರದಿಯಾಗಿವೆ.
ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ ಕಾಲಿ ಮೇಯರ್ ಅಲೆಜಾಂಡ್ರೊ ಎಡೆರ್, “ನಾವು ರಕ್ಷಣಾ ಕಾರ್ಯಾಚರಣೆಯ ಅಂತಿಮ ಹಂತ ತಲುಪಿದ್ದೇವೆ. 72 ಗಂಟೆಗಳ ಗಡುವಿನ ಹೊರತಾಗಿಯೂ ನಾವು ಈಗಲೂ ಜೀವಂತವಾಗಿ ಬದುಕುಳಿದಿರುವವರನ್ನು ಪತ್ತೆ ಹಚ್ಚಲು ಸಾಧ್ಯವಿದೆ” ಎಂದು ಹೇಳಿದ್ದಾರೆ.






