ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಆರೋಪ : ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ವೀಸಾ ರದ್ದು ಪಡಿಸಲು ಅಮೆರಿಕ ನಿರ್ಧಾರ

ಗುಸ್ತಾವೊ ಪೆಟ್ರೋ | PC : aljazeera.com
ವಾಶಿಂಗ್ಟನ್,27: ನ್ಯೂಯಾರ್ಕ್ನ ಬೀದಿಗಳಲ್ಲಿ ಶುಕ್ರವಾರ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆ ಸಂದರ್ಭ ‘ಪ್ರಚೋದನಕಾರಿ’ ಭಾಷಣ ಮಾಡಿದ ಆರೋಪದಲ್ಲಿ ಕೊಲಂಬಿಯಾದ ಎಡಪಂಥೀಯ ಅಧ್ಯಕ್ಷ ಗುಸ್ತಾವೊ ಪೆಟ್ರೋ ಅವರ ವೀಸಾವನ್ನು ರದ್ದುಪಡಿಸಿರುವುದಾಗಿ ಅಮೆರಿಕ ಹೇಳಿದೆ.
ಅಮೆರಿಕದ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ವಿಷಯವನ್ನು ಪ್ರಕಟಿಸಿದೆ. ‘‘ ಇಂದು ಬೆಳಗ್ಗೆ ಕೊಲಂಬಿಯಾದ ಅಧ್ಯಕ್ಷ ಪೆಟ್ರೋಗುಸ್ತಾವೊ ಅವರು ನ್ಯೂಯಾರ್ಕ್ ನಗರದ ರಸ್ತೆಯಲ್ಲಿ ನಿಂತು, ಆದೇಶಗಳನ್ನು ಪಾಲಿಸದಂತೆ ಹಾಗೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂತೆ ಅಮೆರಿಕ ಸೈನಿಕರನ್ನು ಆಗ್ರಹಿಸಿದ್ದರು’’ ಎಂದು ಹೇಳಿದೆ.
ಪೆಟ್ರೋಗುಸ್ತಾವೊ ಅವರು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ, ಅವರು ನ್ಯೂಯಾರ್ಕ್ನಲ್ಲಿ ಭಾರೀ ಸಂಖ್ಯೆಯನ್ನು ಜನಸಮೂಹವನ್ನುದ್ದೇಶಿಸಿ ಸ್ಪ್ಯಾನಿಶ್ ಭಾಷೆಯಲ್ಲಿ ಮಾತನಾಡಿದ್ದರು. ಅಮೆರಿಕದ ಸೇನೆಗಿಂತಲೂ ದೊಡ್ಡದಾದ ಸೇನೆಯನ್ನು ಕಟ್ಟಲು, ಜಗತ್ತಿನ ವಿವಿಧ ದೇಶಗಳು ತಮ್ಮ ಸೈನಿಕರನ್ನು ಕೊಡುಗೆಯಾಗಿ ನೀಡಬೇಕೆಂದು ಹೇಳಿದ್ದರು.
‘‘ಮಾನವೀಯತೆಯತ್ತ ಬಂಧೂಕುಗಳನ್ನು ಗುರಿಯಿಡಬಾರದೆಂದು ನಾನು ಅಮೆರಿಕದ ಎಲ್ಲಾ ಸೈನಿಕರನ್ನು ಕೋರುತ್ತೇನೆ. ಟ್ರಂಪ್ ಆದೇಶವನ್ನು ಪಾಲಿಸದಿರಿ, ಮಾನವತೆಯ ಆದೇಶವನ್ನು ಪಾಲಿಸಿ" ಎಂದು ಪೆಟ್ರೊ ಹೇಳಿದ್ದರು.
ಪೆಟ್ರೋ ಅವರು ಶುಕ್ರವಾರ ರಾತ್ರಿ ಅಮೆರಿಕದಿಂದ ಕೊಲಂಬಿಯಾ ರಾಜಧಾನಿ ಬೊಗೊಟಾಗೆ ಪ್ರಯಾಣಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಪೆಟ್ರೊ ಅವರು ಹೇಳಿಕೆಯೊಂದನ್ನು ನೀಡಿ, ತಾನು ಇಟಲಿ ಪೌರತ್ವವನ್ನು ಹೊಂದಿರುವುದರಿಂದ ಅಮೆರಿಕ ಪ್ರವೇಶಿಸಲು ತನಗೆ ವೀಸಾದ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.







