ಅಧ್ಯಕ್ಷರನ್ನು ಭೇಟಿಯಾಗಲು ಮಾಸ್ಕೊಗೆ ಬನ್ನಿ: ಝೆಲೆನ್ಸ್ಕಿಗೆ ರಶ್ಯ ಆಹ್ವಾನ

Photo Credit : chatgpt
ಮಾಸ್ಕೊ: ಮಿಯಾಮಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಭೇಟಿಯಾಗಲು ಸಿದ್ಧ ಎಂಬ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆಯನ್ನು ರಶ್ಯ ತಿರಸ್ಕರಿಸಿದ್ದು, ಪುಟಿನ್ ಮತ್ತು ಝೆಲೆನ್ಸ್ಕಿ ನಡುವಿನ ಯಾವುದೇ ನೇರ ಭೇಟಿಯು ರಶ್ಯದ ರಾಜಧಾನಿ ಮಾಸ್ಕೊದಲ್ಲಿ ಮಾತ್ರ ನಡೆಯಬಹುದು ಎಂಬ ನಿಲುವನ್ನು ಪುನರುಚ್ಚರಿಸಿದೆ.
ಇಂತಹ ಭೇಟಿಗೆ ಬೇರೆ ಯಾವುದೇ ಪರ್ಯಾಯ ಸ್ಥಳವನ್ನು ರಶ್ಯ ಪರಿಗಣಿಸುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ `ಉಕ್ರೇನ್ನ ನಾಯಕರೊಂದಿಗಿನ ನೇರ ಭೇಟಿ ಮಾಸ್ಕೊದಲ್ಲಿ ಮಾತ್ರ ಎಂಬ ರಶ್ಯದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿರುವುದಾಗಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಕ್ರೇನ್ನೊಂದಿಗೆ ಮಾತುಕತೆ ನಡೆಸುವುದನ್ನು ರಶ್ಯ ವಿರೋಧಿಸುತ್ತಿಲ್ಲ. ಆದರೆ ಮಾತುಕತೆಯ ಸಂದರ್ಭ ದಾಳಿಯನ್ನು ನಿಲ್ಲಿಸಬೇಕು ಎಂಬ ಷರತ್ತನ್ನು ವಿರೋಧಿಸುತ್ತದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.




