‘ಅಮೆರಿಕಾಸ್ ಗಾಟ್ ಟ್ಯಾಲೆಂಟ್ʼ ಮೂಲಕ ಖ್ಯಾತಿ ಪಡೆದಿದ್ದ ಕಾಮೆಡಿಯನ್ ಕಬೀರ್ ಸಿಂಗ್ ನಿಧನ

ಕಾಮೆಡಿಯನ್ ಕಬೀರ್ ಸಿಂಗ್ | PC : Kabir Kabeezy Singh \ FACEBOOK
ವಾಶಿಂಗ್ಟನ್: ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್ ಸೀಸನ್ 16’ನಲ್ಲಿನ ತಮ್ಮ ಅತ್ಯಮೋಘ ಹಾಸ್ಯ ಪ್ರದರ್ಶನದಿಂದ ಮನೆಮಾತಾಗಿದ್ದ ಕಾಮೆಡಿಯನ್ ಕಬೀರ್ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.
ಕಬೀರ್ ಸಿಂಗ್ ರ ಆತ್ಮೀಯ ಸ್ನೇಹಿತ ಹಾಗೂ ಸಹ ಹಾಸ್ಯ ಕಲಾವಿದ ಜೆರೆಮಿ ಕರ್ರಿ ತಮ್ಮ ಸ್ನೇಹಿತನ ನಿಧನದ ಸುದ್ದಿಯನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಕಬೀರ್ ಸಿಂಗ್ ರ ಸಾವಿನ ಕಾರಣ ಇನ್ನೂ ನಿಗೂಢವಾಗಿದ್ದು, ವಿಷಪ್ರಾಶನ ಫಲಿತಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.
“ಕಬೀರ್ ಸಿಂಗ್ ನಿಧನರಾಗಿದ್ದಾರೆ ಎಂದು ಎಲ್ಲರಿಗೂ ತಿಳಿಸಲು ನನಗೆ ತೀವ್ರ ವಿಷಾದವಾಗುತ್ತಿದೆ. ಅವರು ನಿದ್ರಾವಸ್ಥೆಯಲ್ಲಿದ್ದಾಗಲೇ ಮೃತಪಟ್ಟಿದ್ದು, ನಾನು ಮಾಡುತ್ತಿರುವ ಅತ್ಯಂತ ದುಃಖಕರ ಪೋಸ್ಟ್ ಇದಾಗಿದೆ” ಎಂದು ಫೇಸ್ ಬುಕ್ ನಲ್ಲಿ ಜೆರೆಮಿ ಬರೆದುಕೊಂಡಿದ್ದಾರೆ.
“ಕಬೀರ್ ಸಿಂಗ್ ಅಂತ್ಯಕ್ರಿಯೆ ಡಿಸೆಂಬರ್ 14ರ ಬೆಳಗ್ಗೆ 8.30ಕ್ಕೆ ನೆರವೇರಲಿದ್ದು, ಎಲ್ಲರೂ ಅವರ ಕುಟುಂಬದ ಸದಸ್ಯರಿಗಾಗಿ ಪ್ರಾರ್ಥಿಸಿ” ಎಂದೂ ಅವರು ಮನವಿ ಮಾಡಿದ್ದಾರೆ.
ಕಬೀರ್ ಸಿಂಗ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೆ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಸಂತಾಪದ ಮಹಾಪೂರ ಹರಿದು ಬರುತ್ತಿದೆ.







