ರಷ್ಯಾ-ಉಕ್ರೇನ್ ಸಂಘರ್ಷ : ಕನಿಷ್ಠ 22 ಮಂದಿ ಮೃತ್ಯು

Photo: x.com/channelstv
ಮಾಸ್ಕೋ, ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ದಾಳಿ ಪ್ರತಿದಾಳಿಯಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ. ಉಭಯ ದೇಶಗಳು ದಾಳಿಗಳನ್ನು ಮುಂದುವರೆಸುತ್ತಿರುವುದರಿಂದ, ರಷ್ಯಾದಲ್ಲಿ ಕನಿಷ್ಠ 11 ಜನರು ಮತ್ತು ಉಕ್ರೇನ್ನಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಎರಡೂ ಕಡೆಯ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಗೆಲೆಂಡ್ಝಿಕ್ ಬಳಿಯ ರೆಸಾರ್ಟ್ ಗ್ರಾಮವಾದ ಅರ್ಖಿಪೋ-ಒಸಿಪೋವ್ಕಾ ಮೇಲೆ ಡ್ರೋನ್ ಅವಶೇಷಗಳು ಬಿದ್ದಾಗ ಮೂವರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 40 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ದಕ್ಷಿಣ ಕ್ರಾಸ್ನೋಡರ್ ಪ್ರದೇಶದ ಗವರ್ನರ್ ವೆನಿಯಾಮಿನ್ ಕೊಂಡ್ರಾಟ್ಯೆವ್ ಹೇಳಿದ್ದಾರೆ.
ಉಕ್ರೇನ್ನಲ್ಲಿ, ಯುದ್ಧದ ಸಮಯದಲ್ಲಿ ಪದೇ ಪದೇ ಗುರಿಯಾಗುತ್ತಿರುವ ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದ ಕ್ರಿವಿ ರಿಹ್ ಜಿಲ್ಲೆಯ ಪೆಟ್ರೋಲ್ ಬಂಕ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ತುರ್ತು ರಕ್ಷಣಾ ಕಾರ್ಯಕರ್ತ ಮತ್ತು ಅವರ ಎಂಟು ವರ್ಷದ ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ದಾಳಿಯ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡು, ಪೆಟ್ರೋಲ್ ಬಂಕ್ ಮತ್ತು ಹತ್ತಿರದ ವಾಹನಗಳಿಗೆ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ಒಲೆಕ್ಸಾಂಡರ್ ಹಾಂಝಾ ಟೆಲಿಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಷ್ಯಾದ ಇ-ಕಾಮರ್ಸ್ ದೈತ್ಯ ವೈಲ್ಡ್ ಬೆರೀಸ್ ಮೇಲಿನ ಇತ್ತೀಚಿನ ಉಕ್ರೇನ್ ದಾಳಿಯಲ್ಲಿ, ಪೂರ್ವ ರಷ್ಯಾದ ವ್ಲಾಡಿಮಿರ್ ಪ್ರದೇಶದ ಕ್ರಿಯಾಸ್ಟೊವೊ ಗ್ರಾಮದ ಗೋದಾಮಿಗೆ ಡ್ರೋನ್ ಅಪ್ಪಳಿಸಿದೆ. ರಷ್ಯಾದ ಯುದ್ಧದ ಪ್ರಯತ್ನಗಳಲ್ಲಿ ವೈಲ್ಡ್ ಬೆರೀಸ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಎರಡೂ ಕಡೆಯವರು ನಾಗರಿಕರನ್ನು ಗುರಿಯಾಗಿಸುತ್ತಿರುವುದನ್ನು ನಿರಾಕರಿಸುತ್ತಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ನಾಗರಿಕರ ಸಾವುಗಳು ಹೆಚ್ಚಾಗಿವೆ.






