ಸಂಘರ್ಷ ತೀವ್ರ: ಹಾರ್ಮುಝ್ ಜಲಸಂಧಿ ಕುರಿತ ಮತದಾನ ಮುಂದಕ್ಕೆ ಹಾಕಿದ ಭದ್ರತಾ ಮಂಡಳಿ

PC: x.com/FRANCE24
ನ್ಯೂಯಾರ್ಕ್: ಹಾರ್ಮುಝ್ ಜಲಸಂಧಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಶಿಪ್ಪಿಂಗ್ ಸಂರಕ್ಷಿಸುವ ಕುರಿತಂತೆ ಬಹರೈನ್ ಪ್ರಾಯೋಜಿತ ನಿರ್ಣಯದ ಮೇಲಿನ ಮತದಾನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದಿನ ವಾರಕ್ಕೆ ಮುಂದೂಡಿದೆ. ಶುಕ್ರವಾರ ಈ ಸಂಬಂಧ ಚರ್ಚಿಸಲು ನಿರ್ಧರಿಸಲಾಗಿತ್ತು. ಬಳಿಕ ಶನಿವಾರಕ್ಕೆ ಅದನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಮುಂದಕ್ಕೆ ಹಾಕಲಾಗಿದ್ದು, ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.
ಮಂಡಳಿಯ ಅಧ್ಯಕ್ಷ ಸ್ಥಾನ ಹೊಂದಿರುವ ಬಹರೈನ್ ಗುರುವಾರ ಇದರ ಕರಡು ಸಿದ್ಧಪಡಿಸಿತ್ತು. ಈ ಆಯಕಟ್ಟಿನ ಪ್ರದೇಶಗಳಲ್ಲಿ ಕನಿಷ್ಠ ಮುಂದಿನ ಆರು ತಿಂಗಳ ಕಾಲ ಹಡಗುಗಳ ಸರಾಗ ಸಂಚಾರವನ್ನು ಖಾತರಿಪಡಿಸಲು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡುವ ನಿರ್ಣಯ ಇದಾಗಿರುತ್ತದೆ. ಈ ಮಾರ್ಗದ ಮೂಲಕ ಜಾಗತಿಕ ತೈಲ ಸಾಗಾಣಿಕೆಯ ಶೇಕಡ ಐದನೇ ಒಂದರಷ್ಟು ಪಾಲು ಸಾಗಾಟವಾಗುತ್ತದೆ. ಅಮೆರಿಕ ಹಾಗೂ ಇಸ್ರೇಲ್ ಫೆಬ್ರುವರಿ 28ರಂದು ದಾಳಿ ಆರಂಭಿಸಿದ ಬಳಿಕ ಇರಾನ್ ಈ ಜಲಸಂಧಿಯನ್ನು ಮುಚ್ಚಿತ್ತು. ಇದು ತೈಲ ಬೆಲೆ ಏರಿಕೆಗೆ ಕಾರಣವಾಗಿರುವುದು ಮಾತ್ರವಲ್ಲದೇ ಪ್ರಾದೇಶಿಕ ಭದ್ರತೆ ಕುರಿತ ಕಳವಳಕ್ಕೂ ಕಾರಣವಾಗಿತ್ತು.
ಏತನ್ಮಧ್ಯೆ ದಕ್ಷಿಣ ಹಾಗೂ ಕೇಂದ್ರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಅಮೆರಿಕದ ಯುದ್ಧವಿಮಾನವನ್ನು ವಶಪಡಿಸಿಕೊಂಡು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ವರದಿಗಳ ಬಗ್ಗೆ ವಿವರವಾದ ಹೇಳಿಕೆ ನೀಡಲು ಟ್ರಂಪ್ ನಿರಾಕರಿಸಿದ್ದಾರೆ. ಇದರಿಂದ ಮಧ್ಯಪ್ರಾಚ್ಯ ಯುದ್ಧದಲ್ಲಿ ಒತ್ತೆಯಾಳುಗಳನ್ನು ಇರಿಸಿಕೊಳ್ಳುವ ಹಂತಕ್ಕೆ ಸಂಘರ್ಷ ಉಲ್ಬಣಿಸಿದೆ. ಇರಾನ್ ನ ಪ್ರತಿದಾಳಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಛೇದಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಅಂತೆಯೇ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲಿ ಸೈನಿಕರು ಮತ್ತು ಸೇನಾ ವಾಹನಗಳನ್ನು ಗುರಿ ಮಾಡಿ ಸರಣಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಹಿಝ್ಬುಲ್ಲಾ ಪ್ರಕಟಿಸಿದೆ. ಇಸ್ರೇಲ್ ಗಡಿಗೆ ಹೊಂದಿಕೊಂಡಿರುವ ಅಲ್ ಸರ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಿಕೆ ನೀಡಿದೆ.







