ಹಿಂದ್ ರಜಬ್ ಹತ್ಯೆ | ಅಮೆರಿಕದಲ್ಲಿರುವ ಇಸ್ರೇಲಿನ ಕಮಾಂಡರ್ನನ್ನು ಬಂಧಿಸುವಂತೆ ನ್ಯಾಯಾಂಗ ಇಲಾಖೆಗೆ ಕಾಂಗ್ರೆಸ್ ಸದಸ್ಯೆ ರಶೀದಾ ತ್ಲೈಬ್ ಆಗ್ರಹ
ಯುದ್ಧಾಪರಾಧಗಳ ಆರೋಪದಡಿ ತನಿಖೆಗೆ ಹಿಂದ್ ರಜಬ್ ಫೌಂಡೇಶನ್ ಮನವಿ

ರಶೀದಾ ತ್ಲೈಬ್ | ಹಿಂದ್ ರಜಬ್ (Photo: PBS/Al-Jazeera)
ವಾಷಿಂಗ್ಟನ್: ಗಾಝಾದಲ್ಲಿ ಐದು ವರ್ಷದ ಬಾಲಕಿ ಹಿಂದ್ ರಜಬ್ ಹತ್ಯೆ ಪ್ರಕರಣ ಸೇರಿದಂತೆ ಯುದ್ಧಾಪರಾಧಗಳ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಸ್ತುತ ಅಮೆರಿಕದಲ್ಲಿರುವ ಇಸ್ರೇಲಿ ಸೇನಾ ಕಮಾಂಡರ್ ನನ್ನು ತನಿಖೆ ನಡೆಸಿ ಬಂಧಿಸುವಂತೆ ಅಮೆರಿಕದ ಕಾಂಗ್ರೆಸ್ ಸದಸ್ಯೆ ರಶೀದಾ ತ್ಲೈಬ್ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದ್ದಾರೆ.
‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ನರಮೇಧ ತಡೆ ಒಪ್ಪಂದ ಮತ್ತು ಜಿನೀವಾ ಒಪ್ಪಂದಗಳಿಗೆ ಸಹಿ ಹಾಕಿರುವ ರಾಷ್ಟ್ರವಾಗಿ, ಯುದ್ಧಾಪರಾಧ ಹಾಗೂ ನರಮೇಧದ ಕೃತ್ಯಗಳ ಆರೋಪ ಎದುರಿಸುತ್ತಿರುವ ಕಮಾಂಡರ್ ನನ್ನು ತನಿಖೆ ನಡೆಸಿ ಬಂಧಿಸಲು ಅಮೆರಿಕ ಬದ್ಧವಾಗಿದೆ ಎಂದು ಹೇಳಿದ್ದಾರೆ. ನ್ಯಾಯಾಂಗ ಇಲಾಖೆಯು ಕಾನೂನು ಪಾಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಹಿಂದ್ ರಜಬ್ ಫೌಂಡೇಶನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ನ 52ನೇ ಶಸ್ತ್ರಸಜ್ಜಿತ ಬೆಟಾಲಿಯನ್ ನ ‘ವ್ಯಾಂಪೈರ್ ಎಂಪೈರ್’ ಕಂಪೆನಿಯ ನೇತೃತ್ವ ವಹಿಸಿದ್ದ ಸೀನ್ ಗ್ಲಾಸ್ ಪ್ರಸ್ತುತ ಅಮೆರಿಕದಲ್ಲಿದ್ದಾರೆ ಎಂದು ಹಿಂದ್ ರಜಬ್ ಫೌಂಡೇಶನ್ ತಿಳಿಸಿದೆ. ಹಿಂದ್ ರಜಬ್ ಹತ್ಯೆ ನಡೆದ ಸಂದರ್ಭದಲ್ಲಿ ಗ್ಲಾಸ್ ನೇತೃತ್ವದ ಪಡೆ ಬಾಲಕಿಯ ವಾಹನದಿಂದ ಕೆಲವೇ ನೂರು ಮೀಟರ್ ದೂರದಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಫೌಂಡೇಶನ್ ತನ್ನ ತನಿಖೆಯ ಆಧಾರದಲ್ಲಿ ಹೇಳಿದೆ.
ಅಲ್-ಶಿಫಾ ಆಸ್ಪತ್ರೆ ಮೇಲಿನ ದಾಳಿಗಳು, ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (UNRWA)ಯ ಪ್ರಧಾನ ಕಚೇರಿ, ವಸತಿ ಪ್ರದೇಶಗಳು ಹಾಗೂ ರಫಾ ಗಡಿ ದಾಟು ತಾಣದ ನಾಶದಲ್ಲಿಯೂ ಗ್ಲಾಸ್ ಭಾಗಿಯಾಗಿದ್ದಾರೆ ಎಂದು ಫೌಂಡೇಶನ್ ಆರೋಪಿಸಿದೆ.
‘ಸಾಕ್ಷ್ಯಗಳು ಗಂಭೀರ ಮತ್ತು ವ್ಯಾಪಕ’
‘ಈ ಪ್ರಕರಣದ ಕಡತದಲ್ಲಿರುವ ಸಾಕ್ಷ್ಯಗಳು ಅತ್ಯಂತ ಗಂಭೀರ ಮತ್ತು ವ್ಯಾಪಕವಾಗಿವೆ. ಭೌಗೋಳಿಕವಾಗಿ ಗುರುತಿಸಬಹುದಾದ ಚಿತ್ರಗಳು, ವಿಧಿವಿಜ್ಞಾನ ವಿಶ್ಲೇಷಣೆ, ಶಂಕಿತರು ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ವಿಷಯಗಳು ಹಾಗೂ ಅವರ ಧ್ವನಿಯ ದಾಖಲೆಗಳು ಸಾಕ್ಷ್ಯಗಳಲ್ಲಿವೆ’ ಎಂದು ಫೌಂಡೇಶನ್ನ ಕಾನೂನು ವಿಭಾಗದ ಮುಖ್ಯಸ್ಥೆ ನಟಾಚಾ ಬ್ರಾಕ್ ಹೇಳಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆಯು ಕೂಡಲೇ ತನಿಖೆ ಆರಂಭಿಸಬೇಕು ಎಂದು ಫೌಂಡೇಶನ್ ಒತ್ತಾಯಿಸಿದೆ ಎಂದು Aljazeera ವರದಿ ಮಾಡಿದೆ.






