ಪಾಕ್ ವಿರುದ್ಧದ ಭಾರತದ ಕ್ರಮ ಸರಿಯಾಗಿದೆ: ಕಾಂಗ್ರೆಸ್ ಸಂಸದ ಶಶಿ ತರೂರ್

ಶಶಿ ತರೂರ್ (PTI)
ನ್ಯೂಯಾರ್ಕ್: ನಾನು ಸರ್ಕಾರದ ಪರ ಕೆಲಸ ಮಾಡುವುದಿಲ್ಲ. ನಾನು ಪ್ರತಿಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, ಇದು ಪ್ರತಿದಾಳಿಯ ಸಮಯವೆಂದು ನಾನು ಹೇಳಿದ್ದೆ. ಮತ್ತು ಭಾರತವು ನಿಖರವಾಗಿ ಅದನ್ನೇ ಮಾಡಿದೆ. ಭಾರತದ ಕ್ರಮ ಸರಿಯಾಗಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ನ್ಯೂಯಾರ್ಕ್ನಲ್ಲಿ ಭಾರತೀಯ ಕಾನ್ಸುಲೇಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪಹಲ್ಗಾಮ್ ದಾಳಿಗೆ ಭಾರತ ನಡೆಸಿದ ಪ್ರತೀಕಾರ ದಾಳಿ ಹೊಸ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ನಾಗರಿಕರನ್ನು ಕೊಂದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪಾಕಿಸ್ತಾನದಲ್ಲಿ ಯಾರಾದರೂ ಭಾವಿಸಿದರೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದವರು ಘೋಷಿಸಿದ್ದಾರೆ.
ಉಗ್ರವಾದದ ವಿರುದ್ಧ ಭಾರತದ ನಿಲುವನ್ನು ಮತ್ತು ಭಯೋತ್ಪಾದನೆಯೊಂದಿಗೆ ಪಾಕಿಸ್ತಾನದ ಸಂಪರ್ಕವನ್ನು ಜಾಗತಿಕ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ನಿಯೋಜಿತ ಸಂಸದೀಯ ನಿಯೋಗದ ನೇತೃತ್ವವನ್ನು ತರೂರ್ ವಹಿಸಿದ್ದಾರೆ. ಈ ನಿಯೋಗವು ಅಮೆರಿಕ, ಗಯಾನಾ, ಪನಾಮಾ, ಕೊಲಂಬಿಯಾ, ಬ್ರೆಝಿಲ್ಗೆ ಭೇಟಿ ನೀಡಲಿದೆ.
ಯಾವುದನ್ನೂ ಆರಂಭಿಸಲು ನಾವು ಬಯಸುವುದಿಲ್ಲ. ನಾವು ಭಯೋತ್ಪಾದಕರಿಗೆ ಸಂದೇಶವನ್ನು ರವಾನಿಸಿದ್ದೇವೆ. ನೀವು ಆರಂಭಿಸಿದ್ದಕ್ಕೆ ನಿಮಗೆ ಉತ್ತರ ದೊರಕಿದೆ. ಈಗ ನೀವು ನಿಲ್ಲಿಸಿದರೆ ನಾವೂ ನಿಲ್ಲಿಸುತ್ತೇವೆ. ಯುದ್ಧ ಭಾರತದ ಉದ್ದೇಶವಲ್ಲ. ಶಾಂತಿ ಮತ್ತು ಆರ್ಥಿಕ ಪ್ರಗತಿ ಭಾರತದ ಗುರಿ ಎಂದು ಹೇಳಿದ ತರೂರ್, ಪಾಕಿಸ್ತಾನವು ಪ್ರಾದೇಶಿಕ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಭಾರತ ರಾಜತಾಂತ್ರಿಕ ಕ್ರಮಗಳನ್ನು ಪ್ರಯತ್ನಿಸಿತು. ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಗಿದೆ. ಆದರೆ ಪಾಕಿಸ್ತಾನ ನಿರಾಕರಿಸುತ್ತಾ ಬಂದಿದೆ. ಯಾವುದೇ ಅಪರಾಧ ಸಾಬೀತಾಗಿಲ್ಲ. ಭಯೋತ್ಪಾದಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಭಯೋತ್ಪಾದಕರ ಮೂಲಸೌಕರ್ಯಗಳನ್ನು ಕೆಡವಲು ಪ್ರಯತ್ನ ನಡೆದಿಲ್ಲ ಮತ್ತು ಆ ದೇಶ ಭಯೋತ್ಪಾದಕರ ಸುರಕ್ಷಿತ ತಾಣವಾಗಿ ಮುಂದುವರಿದಿದೆ. ಆದ್ದರಿಂದ ನಾವು ನಮ್ಮ ದೃಷ್ಟಿಕೋನದಿಂದ ಉತ್ತರಿಸಿದ್ದೇವೆ. ನೀವು ಇದನ್ನು ಮಾಡಿದ್ದರೆ ಅದಕ್ಕೆ ತಕ್ಕ ಪ್ರತ್ಯುತ್ತರ ಪಡೆಯುತ್ತೀರಿ. ಆದ್ದರಿಂದ ಈ ಕಾರ್ಯಾಚರಣೆಯ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ. ನಮಗೆ ಸ್ವಯಂ ರಕ್ಷಣೆಯ ಹಕ್ಕು ಇದೆ. ನಾವು ಆ ಹಕ್ಕನ್ನು ಚಲಾಯಿಸಿದ್ದೇವೆ. ಆದರೆ ಅದನ್ನು ಬೇಜವಾಬ್ದಾರಿಯ ರೀತಿಯಲ್ಲಿ ಮಾಡಿಲ್ಲ. ಈ ಸಂದೇಶವನ್ನು ಇವತ್ತು ಎಲ್ಲರಿಗೂ ನೀಡಲು ಬಯಸುತ್ತೇನೆ' ಎಂದು ಶಶಿ ತರೂರ್ ಹೇಳಿದ್ದಾರೆ.







