ಮೊರಾಕ್ಕೊ- ಸಿಯುಟಾ ಗಡಿಯಲ್ಲಿ ತಡೆಗೋಡೆ ನಿರ್ಮಾಣ: ವಲಸಿಗರನ್ನು ತಡೆಯಲು ಸ್ಪೇನ್ ತೀರ್ಮಾನ

Photo Credit : AP
ಮ್ಯಾಡ್ರಿಡ್: ಉತ್ತರ ಆಫ್ರಿಕಾದಲ್ಲಿರುವ ತನ್ನ ಪ್ರಾದೇಶಿಕ ಪ್ರದೇಶವಾದ ಸಿಯುಟಾ ಮತ್ತು ನೆರೆಯ ಮೊರಾಕ್ಕೊ ನಡುವಿನ ಸಮುದ್ರ ಗಡಿಯಲ್ಲಿ 500 ಮೀಟರ್ ಉದ್ದದ ತಡೆಗೋಡೆಯನ್ನು ನಿರ್ಮಿಸುವುದಾಗಿ ಸ್ಪೇನ್ ಘೋಷಿಸಿದೆ. ಈ ವಾರದ ಆರಂಭದಲ್ಲಿ ಸುಮಾರು 60,000 ವಲಸಿಗರು ಗಡಿಯನ್ನು ಧ್ವಂಸಗೊಳಿಸಿ ಒಳನುಗ್ಗಿದ ನಂತರ ಸ್ಪೇನ್ ಈ ನಿರ್ಧಾರಕ್ಕೆ ಬಂದಿದೆ.
ಗಡಿಯನ್ನು ದಾಟುವ ಪ್ರಯತ್ನದಲ್ಲಿ ಕೆಲವರು ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದರೆ, ಇನ್ನು ಕೆಲವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 67ಕ್ಕೆ ಏರಿಕೆಯಾಗಿದೆ ಎಂದು ಸ್ಪೇನ್ ಸರಕಾರ ಶನಿವಾರ ತಿಳಿಸಿದೆ.
ಶನಿವಾರ ಬೆಳಿಗ್ಗೆ ಸಿಯುಟಾದ ತಾರಾಜಲ್ ಕಡಲತೀರಕ್ಕೆ ಬಂದು ತಲುಪಿದ ಕೆಲ ದಣಿದ ವಲಸಿಗರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು, ಮರಳಿ ಗಡಿಯಾಚೆಗೆ ಕಳುಹಿಸಿದರು. ಸ್ಪೇನ್ನ ಆಂತರಿಕ ಸಚಿವಾಲಯದ ಪ್ರಕಾರ ಸ್ಪೇನ್ ಪ್ರದೇಶವನ್ನು ಪ್ರವೇಶಿಸಿದ್ದ ಬಹುತೇಕ ವಲಸಿಗರು ಈಗಾಗಲೇ ಮೊರಾಕ್ಕೊಗೆ ಹಿಂತಿರುಗಿದ್ದಾರೆ. ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪೇನ್ನ ಆಂತರಿಕ ಸಚಿವ ಫೆನಾರ್ಂಡೊ ಗ್ರಾಂಡೆ-ಮಾರ್ಲಾಸ್ಕಾ ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.
ಮೊರಾಕ್ಕೊ ಸಿಯುಟಾಗೆ ಬೆದರಿಕೆಯಾಗಿದೆಯೇ ಎಂಬ ಪ್ರಶ್ನೆಗೆ ʼಸಿಯುಟಾ ಅಥವಾ ಸ್ಪೇನ್ನ ಇತರ ಭಾಗಗಳಿಗೆ ಮೊರಾಕ್ಕೊ ಬೆದರಿಕೆಯಲ್ಲ, ಅದು ನಮ್ಮ ನಂಬಿಕಸ್ಥ ಭಾಗಿದಾರ' ಎಂದು ಮಾರ್ಲಾಸ್ಕಾ ಪ್ರತಿಕ್ರಿಯಿಸಿದ್ದಾರೆ.
ಇಟಲಿ-ಸ್ಪೇನ್ ಮುಕ್ತ-ಗಡಿ ಪ್ರಯಾಣ ತಾತ್ಕಾಲಿಕ ಸ್ಥಗಿತ:
ಸಿಯುಟಾ ಪ್ರದೇಶಕ್ಕೆ ಬೃಹತ್ ಪ್ರಮಾಣದಲ್ಲಿ ವಲಸಿಗರು ನುಗ್ಗಿದ ಹಿನ್ನೆಲೆಯಲ್ಲಿ, ಇಟಲಿಯು ಸ್ಪೇನ್ನೊಂದಿಗಿನ ಮುಕ್ತ-ಗಡಿ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನಾಗರಿಕರ ರಕ್ಷಣೆ ಮತ್ತು ಯುರೋಪ್ನ ಗಡಿಗಳ ಭದ್ರತೆಗಾಗಿ ಈ ಕ್ರಮ ಅಗತ್ಯವಾಗಿತ್ತು ಎಂದು ಇಟಲಿ ಹೇಳಿದೆ.
ನಮ್ಮ ನಾಗರಿಕರ ಭದ್ರತೆಯನ್ನು ಕಾಪಾಡಲು ಮತ್ತು ಯುರೋಪಿಯನ್ ಗಡಿಗಳನ್ನು ರಕ್ಷಿಸಲು ಸ್ಪೇನ್ನೊಂದಿಗಿನ ಷೆಂಗೆನ್ ಒಪ್ಪಂದದ ತಾತ್ಕಾಲಿಕ ಅಮಾನತು ಅನಿವಾರ್ಯ ಆಯ್ಕೆಯಾಗಿದೆ. ಇದು ಶನಿವಾರದಿಂದ ಒಂದು ತಿಂಗಳ ಕಾಲ ಜಾರಿಯಲ್ಲಿರಲಿದೆ ಎಂದು ಇಟಲಿಯ ಗೃಹ ಸಚಿವಾಲಯ ತಿಳಿಸಿದೆ.
ಸಿಯುಟಾ ಪ್ರವೇಶಿಸಿದ ಮರುದಿನವೇ ಸಾವಿರಾರು ವಲಸಿಗರು ಮೊರಾಕ್ಕೊಗೆ ವಾಪಾಸು:
ಸಿಯುಟಾಗೆ ಗುರುವಾರದಿಂದ ಆರಂಭಿಸಿ ಸುಮಾರು 50,000 ವಲಸಿಗರು ಮೊರಾಕ್ಕೊದಿಂದ ಗಡಿ ದಾಟಿ ಬಂದಿದ್ದಾರೆ ಎಂದು ಸ್ಪೇನ್ನ ಒಳಾಡಳಿತ ಸಚಿವಾಲಯ ತಿಳಿಸಿದೆ. ಆದರೆ, ಎರಡು ದಿನಗಳಲ್ಲಿ 60,000ದಷ್ಟು ಜನರು ಪ್ರವೇಶಿಸಿದ್ದಾರೆ ಎಂದು ಸಿಯುಟಾ ಸ್ವಾಯತ್ತ ಪ್ರಾಂತದ ಅಧ್ಯಕ್ಷ ಜುವಾನ್ ಜೀಸಸ್ ವಿವಾಸ್ ಹೇಳಿದ್ದಾರೆ.
ಈ ಮಧ್ಯೆ, ಸುಮಾರು 48,300 ಜನರು ಮೊರಾಕ್ಕೊಗೆ ಮರಳಿದ್ದಾರೆ ಎಂದು ಒಳಾಡಳಿತ ಸಚಿವಾಲಯ ಶನಿವಾರ ತಿಳಿಸಿದೆ.
ಸಿಯುಟಾ ಪ್ರವೇಶಿಸಿದ ಅನೇಕ ವಲಸಿಗರಿಗೆ ಆಹಾರ, ವಸತಿ ಅಥವಾ ಕೆಲಸ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಶೀಘ್ರದಲ್ಲೇ ಸ್ವಯಂಪ್ರೇರಿತರಾಗಿ ಮರಳಲು ಪ್ರಾರಂಭಿಸಿದರು. ಅನಾಥ ಮಕ್ಕಳು ಸೇರಿದಂತೆ ಸಾವಿರಾರು ವಲಸಿಗರು ಉದ್ಯಾನವನಗಳಲ್ಲಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಮಲಗುವಂತಾಯಿತು. ಸಿಯುಟಾದ ಒಳಗಿನ ಪರಿಸ್ಥಿತಿ ತಾವು ಭಾವಿಸಿದ ರೀತಿಯಲ್ಲಿ ಇರಲಿಲ್ಲ ಎಂದು ಹಲವು ವಲಸಿಗರು ತಿಳಿಸಿರುವುದಾಗಿ AP ಸುದ್ದಿಸಂಸ್ಥೆ ವರದಿ ಮಾಡಿದೆ.
ನಿಯಮಬಾಹಿರವಾಗಿ ಪ್ರವೇಶಿಸಿದವರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆಯನ್ನು ಸ್ಪೇನ್ ಅಧಿಕಾರಿಗಳು ಕೂಡ ತ್ವರಿತಗೊಳಿಸಿದ್ದಾರೆ. ಮೊರಾಕ್ಕೊದ ಸಂಪೂರ್ಣ ಸಹಕಾರದೊಂದಿಗೆ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಸ್ ತಿಳಿಸಿದ್ದಾರೆ.






