ವಿಮಾನ ರದ್ದು: ಗ್ರಾಹಕರಿಗೆ ಮರುಪಾವತಿ ಮಾಡುವಂತೆ ಮಲೇಶಿಯಾ ಏರ್ ಲೈನ್ಸ್ಗೆ ಆದೇಶ
ಮೇಕ್ ಮೈ ಟ್ರಿಪ್ಗೂ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

pc:bar and bench
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆ ವಿದೇಶಿ ಪ್ರವಾಸ ಯೋಜನೆ ರದ್ದಾದ ಹಿನ್ನೆಲೆಯಲ್ಲಿ ಟಿಕೆಟ್ ದರ ಮರುಪಾವತಿಸದೆ ವಿಳಂಬ ಮಾಡಿದ ಪ್ರಕರಣದಲ್ಲಿ, 65,802 ರೂ. ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡುವಂತೆ ದಿಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ ಮಲೇಶಿಯಾ ಏರ್ ಲೈನ್ಸ್ಗೆ ಆದೇಶಿಸಿದೆ. ಸೇವಾ ನ್ಯೂನತೆ ಹಾಗೂ ಸುಳ್ಳು ಭರವಸೆ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೇಕ್ ಮೈ ಟ್ರಿಪ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮೇಲೂ ದಂಡ ವಿಧಿಸಲಾಗಿದೆ.
ಟಿಕೆಟ್ ರದ್ದತಿಯಿಂದ ತೊಂದರೆಗೀಡಾದ ಗ್ರಾಹಕ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಮೊದಲು, ಮರುಪಾವತಿ ಪಡೆಯಲು ಮೇಕ್ ಮೈ ಟ್ರಿಪ್ ಮತ್ತು ಮಲೇಶಿಯಾ ಏರ್ ಲೈನ್ಸ್ ನಡುವೆ ಓಡಾಡುವಂತಾಗಿದ್ದ ಪರಿಸ್ಥಿತಿಯನ್ನು ಆಯೋಗ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಗ್ರಾಹಕರನ್ನು ಪರಸ್ಪರ ಸಂಪರ್ಕಿಸಿಕೊಳ್ಳುವಂತೆ ಮಾಡಿರುವುದು ಜವಾಬ್ದಾರಿಯಿಲ್ಲದ ನಡೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
“ದೂರುದಾರನಿಗೆ 60ರಿಂದ 90 ದಿನಗಳೊಳಗೆ ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿರುವುದು ದಾಖಲೆಗಳಿಂದ ಗೋಚರಿಸುತ್ತದೆ. ಆದರೆ ಮರುಪಾವತಿ ನೀಡಲು ಕ್ರಮ ಕೈಗೊಳ್ಳಲಾಗಿಲ್ಲ. ಬದಲಾಗಿ, ಮೇಕ್ ಮೈ ಟ್ರಿಪ್ ಮೂಲಕ ಮಲೇಶಿಯಾ ಏರ್ ಲೈನ್ಸ್ ಅನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ. ಇದರಿಂದ ಮಲೇಶಿಯಾ ಏರ್ ಲೈನ್ಸ್ ಸೇವೆಯಲ್ಲಿ ನ್ಯೂನತೆ ಇರುವುದು ದೃಢಪಟ್ಟಿದೆ,” ಎಂದು ಆಯೋಗ ತನ್ನ ಆದೇಶದಲ್ಲಿ ಹೇಳಿದೆ.
ಮಾರ್ಚ್ 2020ರಲ್ಲಿ ದಿಲ್ಲಿಯಿಂದ ಕೌಲಾಲಂಪುರ್ ಮತ್ತು ಮನಿಲಾ ನಡುವಿನ ಪ್ರಯಾಣಕ್ಕಾಗಿ ಅಕ್ಟೋಬರ್ 2019ರಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಕರಣ್ ಪ್ರದೀಪ್ ಅವರು, ಟಿಕೆಟ್ ರದ್ದಾದ ಹಿನ್ನೆಲೆಯಲ್ಲಿ ಮೇಕ್ ಮೈ ಟ್ರಿಪ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಹಾಗೂ ಮಲೇಶಿಯಾ ಏರ್ ಲೈನ್ಸ್ ವಿರುದ್ಧ ದೂರು ದಾಖಲಿಸಿದ್ದರು.
ಕರಣ್ ಪ್ರದೀಪ್ ಅವರು ತಮ್ಮ ಸಹೋದರ ಹಾಗೂ ನಾದಿನಿಗೆ ವಿವಾಹ ಉಡುಗೊರೆಯಾಗಿ 65,802 ರೂ. ಮೌಲ್ಯದ ಎರಡು ವಿಮಾನ ಟಿಕೆಟ್ಗಳನ್ನು ಖರೀದಿಸಿದ್ದರು. ಮಾರ್ಚ್ 13, 2020ರಿಂದ ಮಾರ್ಚ್ 21, 2020ರವರೆಗೆ ಈ ಪ್ರಯಾಣ ನಿಗದಿಯಾಗಿತ್ತು.
ಆದರೆ ಕೋವಿಡ್-19 ವೇಗವಾಗಿ ಹರಡಿದ ಪರಿಣಾಮ ಹಾಗೂ ಫಿಲಿಪ್ಪೈನ್ಸ್ನಲ್ಲಿ ಲಾಕ್ಡೌನ್ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮಲೇಶಿಯಾ ಏರ್ ಲೈನ್ಸ್ “ಅಲ್ಟಿಮೇಟ್ ಫ್ಲೆಕ್ಸಿಬಿಲಿಟಿ ಟಿಕೆಟ್ ಚೇಂಜ್ ಪಾಲಿಸಿ” ಘೋಷಿಸಿತ್ತು. ಇದರಡಿ ಅನಿಯಮಿತ ದಿನಾಂಕ ಬದಲಾವಣೆ ಸೇರಿದಂತೆ ಹಲವು ವಿನಾಯಿತಿಗಳನ್ನು ನೀಡುವುದಾಗಿ ತಿಳಿಸಲಾಗಿತ್ತು.
ದೂರುದಾರರ ಪ್ರಕಾರ, ಪುನರಾವರ್ತಿತ ಮನವಿಗಳ ಹೊರತಾಗಿಯೂ ಮೇಕ್ ಮೈ ಟ್ರಿಪ್ ಸಂಸ್ಥೆ ವಿಮಾನಯಾನ ಸಂಸ್ಥೆಯ ಫ್ಲೆಕ್ಸಿಬಲ್ ಪಾಲಿಸಿಯ ಬಗ್ಗೆ ಮಾಹಿತಿ ಇಲ್ಲವೆಂದು ಹೇಳಿ ಆರಂಭದಲ್ಲಿ ವೇಳಾಪಟ್ಟಿ ಬದಲಿಸಲು ನಿರಾಕರಿಸಿತ್ತು. ಬಳಿಕ ಟಿಕೆಟ್ ರದ್ದುಗೊಳಿಸಿದರೆ ಸಂಪೂರ್ಣ ಮರುಪಾವತಿ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ದೂರುದಾರರು ರದ್ದತಿಗೆ ಒಪ್ಪಿಕೊಂಡಿದ್ದರು.
ಆದರೂ ಭರವಸೆಯಂತೆ ಮರುಪಾವತಿ ದೊರಕದೆ ಹೋದ ಹಿನ್ನೆಲೆಯಲ್ಲಿ ಅವರು ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಆಯೋಗ, ಗ್ರಾಹಕರಿಗೆ ಬಡ್ಡಿಯೊಂದಿಗೆ ಮೊತ್ತ ಮರುಪಾವತಿಸಲು ಹಾಗೂ ಮೇಕ್ ಮೈ ಟ್ರಿಪ್ ಮೇಲೂ ದಂಡ ವಿಧಿಸಲು ಆದೇಶಿಸಿದೆ.






