ಹಾರ್ಮುಝ್ ಜಲಸಂಧಿಯಲ್ಲಿ ಮುಂದುವರಿದ ಸಂಘರ್ಷ : ಕಚ್ಚಾತೈಲ ಬೆಲೆ ಏರಿಕೆ

Photo: x.com/PressTV
ಮಸ್ಕತ್/ ಟೆಹ್ರಾನ್ : ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಹಡಗುಗಳ ಮೇಲೆ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ದಾಳಿ-ಪ್ರತಿದಾಳಿಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಪೂರೈಕೆಯಲ್ಲಿ ದೀರ್ಘಕಾಲದ ವ್ಯತ್ಯಯ ಉಂಟಾಗುವ ಆತಂಕ ಹೆಚ್ಚಿದೆ. ಇದರ ಪರಿಣಾಮವಾಗಿ ಕಚ್ಚಾತೈಲ ಬೆಲೆಗಳು ಮತ್ತಷ್ಟು ಏರಿಕೆಯಾಗಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಂದು ಮುಂಜಾನೆ ಬ್ರೆಂಟ್ ಕಚ್ಚಾತೈಲ ಫ್ಯೂಚರ್ಸ್ ಬೆಲೆ ಶೇ. 0.54ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಗೆ 96.80 ಡಾಲರ್ ತಲುಪಿದೆ. ಅದೇ ರೀತಿ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾತೈಲ ಬೆಲೆ ಶೇ. 0.72ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ ಗೆ 92.14 ಡಾಲರ್ ತಲುಪಿದೆ ಎಂದು ವರದಿ ತಿಳಿಸಿದೆ.
ಹಾರ್ಮುಝ್ ಜಲಸಂಧಿಯಲ್ಲಿ ‘ಅನಧಿಕೃತ’ ಮಾರ್ಗ ಬಳಸುತ್ತಿದ್ದ ಅಮೆರಿಕ-ಸಂಯೋಜಿತ ಮೂರು ಹಡಗುಗಳು ಹಾಗೂ ಮೂರು ತೈಲ ಟ್ಯಾಂಕರ್ ಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಹೇಳಿದ ಬೆನ್ನಲ್ಲೇ ತೈಲ ಬೆಲೆ ಏರಿಕೆಯಾಗಿದೆ.
ಇರಾನ್ ನ ಮೂರು ಕಚ್ಚಾತೈಲ ಟ್ಯಾಂಕರ್ ಗಳನ್ನು ನಾಶಪಡಿಸಿದ ಅಮೆರಿಕದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಟೆಹ್ರಾನ್ ಹೇಳಿದೆ. ಆದರೆ, ಇರಾನ್ ತನ್ನ ಯುದ್ಧನೌಕೆಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಈ ಕ್ರಮ ಕೈಗೊಂಡಿರುವುದಾಗಿ ವಾಷಿಂಗ್ಟನ್ ತಿಳಿಸಿದೆ.
ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ ಬ್ರೆಂಟ್ ಕಚ್ಚಾತೈಲದ ಬೆಲೆ ಶೇ. 30ಕ್ಕೂ ಹೆಚ್ಚು ಏರಿಕೆಯಾಗಿದೆ.






