ಜೋಷಿಮಠದ ಬಳಿಕ ಉತ್ತರಕಾಶಿ ಗ್ರಾಮದಲ್ಲಿ ಕಾಣಿಸಿಕೊಂಡ ಬಿರುಕುಗಳು
ಭಾರೀ ಮಳೆಗೆ ಗ್ರಾಮದಲ್ಲಿ ಭೂಕುಸಿತ

ಸಾಂದರ್ಭಿಕ ಚಿತ್ರ \ Photo: PTI
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಮಸ್ತಾರಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಹಲವು ಮನೆಗಳ ಗೋಡೆಗಳು ಹಾಗೂ ರಸ್ತೆಗಳಲ್ಲಿ ಬಿರುಕುಗಳು ಕಾಣಿಸಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಆರಂಭದಲ್ಲಿ ಭೂಕುಸಿತದಿಂದ ಸುಮಾರು 900 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡ ಬಳಿಕ ಸಾವಿರಾರು ಜನರನ್ನು ತೆರವುಗೊಳಿಸಲಾದ ಜೋಷಿಮಠದಿಂದ 300 ಕಿ.ಮೀ. ದೂರದಲ್ಲಿ ಈ ಮಸ್ತಾರಿ ಗ್ರಾಮ ಇದೆ.
‘‘ಈ ಗ್ರಾಮದಲ್ಲಿ ಭೂಕುಸಿತ ಹಳೆಯ ಸಮಸ್ಯೆ. ಆದರೆ, ಕಳೆದ ಶನಿವಾರ ಸುರಿದ ಧಾರಾಕಾರ ಮಳೆ ಮನೆಗಳ ಬಿರುಕುಗಳು ಅಗಲವಾಗಲು ಕಾರಣವಾಗಿವೆ. ಬಿರುಕುಗಳಿಂದ ನೀರು ಹೊರ ಹರಿಯಲು ಆರಂಭವಾಗಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ’’ ಎಂದು ಮಸ್ತಾರಿ ಗ್ರಾಮದ ಮುಖ್ಯಸ್ಥ ಸತ್ಯನಾರಾಯಣ ಸೇಮ್ವಾಲ್ ತಿಳಿಸಿದ್ದಾರೆ.
‘‘ಗ್ರಾಮದಲ್ಲಿ ಭೂಕುಸಿತ ನಿರಂತರ ಸಂಭವಿಸುತ್ತಿದೆ. ಆದರೆ, ಆಡಳಿತ ಮಸ್ತಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ’’ಎಂದು ಅವರು ಆರೋಪಿಸಿದ್ದಾರೆ. ಬಿರುಕುಗಳನ್ನು ಪರಿಶೀಲಿಸಲು ವಿಪತ್ತು ನಿರ್ವಹಣಾ ಪ್ರಾಧಿಕಾರದ ತ್ವರಿತ ಸ್ಪಂದನಾ ತಂಡ ಗ್ರಾಮಕ್ಕೆ ಧಾವಿಸಿದೆ. ಅಲ್ಲದೆ, ಜಾಗರೂಕರಾಗಿರುವಂತೆ ಜನರಿಗೆ ಸೂಚಿಸಿದೆ. 1991ರಲ್ಲಿ ಭೂಕಂಪ ಸಂಭವಿಸಿದ ಬಳಿಕ ಮಸ್ತಾರಿಯಲ್ಲಿ ಭೂಕುಸಿತದ ಸಮಸ್ಯೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರಕಾಶಿಯಲ್ಲಿ 1991ರ ಅಕ್ಟೋಬರ್ನಲ್ಲಿ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೂಕಂಪದಿಂದ ಸುಮಾರು 800 ಜನರು ಸಾವನ್ನಪ್ಪಿದ್ದರು. 1997ರಲ್ಲಿ ಭೂಗರ್ಭ ಶಾಸ್ತ್ರಜ್ಞರು ಮಸ್ತಾರಿ ಗ್ರಾಮದಲ್ಲಿ ಸಮೀಕ್ಷೆ ನಡೆಸಿದ್ದರು. ಇತರ ಕೆಲವು ರಕ್ಷಣಾ ಕ್ರಮಗಳ ಜೊತೆಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಜನರಿಗೆ ಸಲಹೆ ನೀಡಿದ್ದರು.