ಕ್ಯೂಬಾ | ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ರದ್ದು

PC : NDTV
ಹವಾನಾ: ಸಂಸತ್ತು ಶುಕ್ರವಾರ ಅಂಗೀಕರಿಸಿದ ಸಾಂವಿಧಾನಿಕ ಸುಧಾರಣೆಯ ಭಾಗವಾಗಿ ತನ್ನ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನಿಗದಿಯಾಗಿದ್ದ ಗರಿಷ್ಠ ವಯೋಮಿತಿಯನ್ನು ಕ್ಯೂಬಾ ರದ್ದುಗೊಳಿಸಿದೆ.
ಕ್ಯೂಬಾದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಗರಿಷ್ಠ 60 ವರ್ಷವನ್ನು ನಿಗದಿಗೊಳಿಸಲಾಗಿತ್ತು. ಐದು ವರ್ಷದ ಅಧಿಕಾರಾವಧಿಯನ್ನು 2 ವರ್ಷ ಪೂರ್ಣಗೊಳಿಸಿದವರು ಮೂರನೇ ಬಾರಿ ಅಧ್ಯಕ್ಷರಾಗುವಂತಿಲ್ಲ ಮತ್ತು ಅಧ್ಯಕ್ಷೀಯ ಅಭ್ಯರ್ಥಿಯ ಕನಿಷ್ಠ ವಯೋಮಿತಿ 35 ವರ್ಷ ಎಂಬ ನಿಯಮಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. `ನಿಷ್ಠೆ ಮತ್ತು ಕ್ರಾಂತಿಕಾರಿ ಪಥದಲ್ಲಿ ಸಾಗಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥರಾಗಿರುವ ವ್ಯಕ್ತಿಗಳು ಯಾವುದೇ ವಯಸ್ಸಿನ ಮಿತಿಯಿಲ್ಲದೆ ಅಧ್ಯಕ್ಷರ ಕರ್ತವ್ಯ ನಿರ್ವಹಿಸಬಹುದು' ಎಂಬ ನಿಯಮವನ್ನು ಸಂಸತ್ತು ಅನುಮೋದಿಸಿದೆ ಎಂದು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಎಸ್ಟೆಬೆನ್ ಲಾಜೊ ಹೇಳಿದ್ದಾರೆ.
94 ವರ್ಷವಾಗಿರುವ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಈಗಲೂ ಸಂಸತ್ತಿನ ಸದಸ್ಯರಾಗಿದ್ದು ಸುಧಾರಣೆಯ ಪರ ಮೊದಲು ಮತ ಚಲಾಯಿಸಿರುವುದಾಗಿ ವರದಿಯಾಗಿದೆ. ಕ್ಯೂಬಾದಲ್ಲಿ ಫಿಡೆಲ್ ಕ್ಯಾಸ್ಟ್ರೋ ಹಾಗೂ ಅವರ ಸಹೋದರ ರೌಲ್ ಕ್ಯಾಸ್ಟ್ರೋ ಸುಮಾರು 60 ವರ್ಷ ಅಧಿಕಾರದಲ್ಲಿದ್ದರು. 2019ರಲ್ಲಿ ಅಧ್ಯಕ್ಷರಿಗೆ 2 ಅವಧಿಯ ಗಡುವು ಎಂಬ ಕಾನೂನು ಜಾರಿಗೆ ಬಂದಿದೆ.





