ಅಮೆರಿಕ: 7 ರಾಜ್ಯಗಳಲ್ಲಿ ನೀರು ಪೂರೈಕೆ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿ

ಸಾಂದರ್ಭಿಕ ಚಿತ್ರ | Photo Credit : magnific.com
ನ್ಯೂಯಾರ್ಕ್: ಅಮೆರಿಕದ ಕನಿಷ್ಠ ಏಳು ರಾಜ್ಯಗಳ ನೀರು ಪೂರೈಕೆ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿಗಳು ನಡೆದಿವೆ ಎಂದು ಫೆಡರಲ್ ಅಧಿಕಾರಿಗಳು ಮತ್ತು ಸೈಬರ್ ಭದ್ರತಾ ತಜ್ಞರನ್ನು ಉಲ್ಲೇಖಿಸಿ ʼದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಕೆಲವು ರಾಜ್ಯಗಳಲ್ಲಿ ನೀರು ಪೂರೈಕೆ ಕಾರ್ಯಚರಣೆಗೆ ಅಡಚಣೆಯಾಗಿದ್ದರೂ ಕುಡಿಯುವ ನೀರು ಕಲುಷಿತಗೊಂಡಿದೆ ಅಥವಾ ಅಸುರಕ್ಷಿತವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸೈಬರ್ ದಾಳಿಯ ನಂತರ ಹಲವಾರು ಜಲಮಂಡಳಿ ಸಂಸ್ಕರಣಾಗಾರಗಳು ನೀರನ್ನು ಕುದಿಸಿ ಬಳಸುವಂತೆ ಸೂಚನೆ ನೀಡಿವೆ ಅಥವಾ ಹಸ್ತಚಾಲಿತ ಕಾರ್ಯಾಚರಣೆಗೆ ಬದಲಾಯಿಸಿಕೊಂಡಿವೆ. ಆದರೂ ಬಾಧಿತ ನೀರು ಸರಬರಾಜು ವ್ಯವಸ್ಥೆಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬರ್ ದಾಳಿಯ ಸರಣಿಯ ಹಿಂದೆ ಇರಾನ್ ಬೆಂಬಲಿತ ಹ್ಯಾಕರ್ಗಳು ಇದ್ದಾರೆಯೇ ಎಂಬುದನ್ನು ಫೆಡರಲ್ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ಆದರೆ ಸೈಬರ್ ದಾಳಿಗೆ ಇರಾನ್ ಕಾರಣ ಎಂಬ ವರದಿಗಳನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ.




