ಟಿಬೆಟಿಯನ್ನರ ಮೂಲಭೂತ ಸ್ವಾತಂತ್ರ್ಯ ಪ್ರೋತ್ಸಾಹಿಸಲು ಬದ್ಧ: ಅಮೆರಿಕ
ದಲೈ ಲಾಮಾ ಜನ್ಮದಿನಾಚರಣೆ ಸಂದರ್ಭ ಚೀನಾಕ್ಕೆ ಪರೋಕ್ಷ ಸಂದೇಶ

Image Source : PTI
ವಾಷಿಂಗ್ಟನ್: ತಮ್ಮ ಧಾರ್ಮಿಕ ಮುಖಂಡರನ್ನು ಯಾವುದೇ ಹಸ್ತಕ್ಷೇಪವಿಲ್ಲದೆ ಮುಕ್ತವಾಗಿ ಆಯ್ಕೆಮಾಡುವ ಟಿಬೆಟಿಯನ್ನರ ಸಾಮರ್ಥ್ಯವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದು ಚೀನಾಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಟಿಬೆಟ್ ನ ಬೌದ್ಧ ಧರ್ಮೀಯರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ 90ನೇ ಜನ್ಮದಿನಾಚರಣೆಗೆ ಶುಭ ಹಾರೈಸಿದ ರೂಬಿಯೊ ` ಟಿಬೆಟಿಯನ್ನರ ಮೂಲಭೂತ ಸ್ವಾತಂತ್ರ್ಯಕ್ಕೆ ಪ್ರೋತ್ಸಾಹ ಮುಂದುವರಿಸಲು ಅಮೆರಿಕ ಬದ್ಧವಾಗಿದೆ. ಏಕತೆ, ಶಾಂತಿ ಮತ್ತು ಸಹಾನುಭೂತಿಯ ಸಂದೇಶವನ್ನು ಸಾಕಾರಗೊಳಿಸುವ ಮೂಲಕ ದಲೈ ಲಾಮಾ ಜನರನ್ನು ಪ್ರೇರೇಪಿಸುತ್ತಲೇ ಇದ್ದಾರೆ ' ಎಂದು ಹೇಳಿದ್ದಾರೆ.
ಟಿಬೆಟಿಯನ್ನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಮೆರಿಕದ ಬೆಂಬಲ ಮುಂದುವರಿಯುತ್ತದೆ ಎಂದು ಚೀನಾಕ್ಕೆ ಪರೋಕ್ಷ ಸಂದೇಶ ರವಾನಿಸಿದ ರೂಬಿಯೊ ` ಮಾನವ ಹಕ್ಕುಗಳು ಮತ್ತು ಟಿಬೆಟಿಯನ್ನರ ಮೂಲಭೂತ ಸ್ವಾತಂತ್ರ್ಯದ ಬಗ್ಗೆ ಗೌರವವನ್ನು ಉತ್ತೇಜಿಸಲು ಅಮೆರಿಕ ಬದ್ಧವಾಗಿದೆ. ಟಿಬೆಟಿಯನ್ನರ ವಿಭಿನ್ನ ಭಾಷಾ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಕಾಪಾಡುವ ಪ್ರಯತ್ನಗಳನ್ನು (ಯಾವುದೇ ಹಸ್ತಕ್ಷೇಪವಿಲ್ಲದೆ ಧಾರ್ಮಿಕ ನಾಯಕರನ್ನು ಆಯ್ಕೆ ಮಾಡುವ ಮತ್ತು ಗೌರವಿಸುವ ಸಾಮರ್ಥ್ಯಗಳನ್ನು ಒಳಗೊಂಡಂತೆ) ನಾವು ಬೆಂಬಲಿಸುತ್ತೇವೆ ಎಂದು ರೂಬಿಯೊ ಹೇಳಿದ್ದಾರೆ.
ಚೀನಾವು ಚಕ್ರವರ್ತಿಗಳ ಆಳ್ವಿಕೆಯಡಿ ಇರುವಾಗಿನಿಂದಲೂ ಪಾಲಿಸಿಕೊಂಡು ಬಂದಿರುವ ಹಳೆಯ ಸಂಪ್ರದಾಯದಂತೆ ಮುಂದಿನ ದಲೈ ಲಾಮಾರನ್ನು ಆಯ್ಕೆ ಮಾಡುವ ಹಕ್ಕನ್ನು ತಾನು ಹೊಂದಿರುವುದಾಗಿ ಚೀನಾ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಟಿಬೆಟ್ ಮೇಲಿನ ಐತಿಹಾಸಿಕ ಅಧಿಕಾರವನ್ನು ಪ್ರತಿಪಾದಿಸುತ್ತಿರುವ ಚೀನಾ ಟಿಬೆಟಿನ ಸ್ವಾತಂತ್ರ್ಯದ ಕರೆಗಳನ್ನು ತಿರಸ್ಕರಿಸುತ್ತಿದೆ.
►ಉತ್ತರಾಧಿಕಾರಿ ಆಯ್ಕೆ ಹಕ್ಕು ಲಾಮಾಗೆ ಇಲ್ಲ: ಚೀನಾ
ದಲಾಯಿ ಲಾಮಾಗೆ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಯಾವುದೇ ಹಕ್ಕು ಇರುವುದಿಲ್ಲ ಎಂದು ಚೀನಾ ರವಿವಾರ ಪ್ರತಿಕ್ರಿಯಿಸಿದೆ.
ಲಾಮಾ ಅವರ ಉತ್ತರಾಧಿಕಾರಿಯ ಆಯ್ಕೆ ಟಿಬೆಟ್ ನ ಬೌದ್ಧ ಧರ್ಮದ 700 ವರ್ಷ ಪುರಾತನ ಸಂಪ್ರದಾಯದ ಭಾಗವಾಗಿದ್ದು ಅದು 14ನೇ ದಲೈ ಲಾಮಾ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಈ ಸಂಪ್ರದಾಯವನ್ನು ಮುಂದುವರಿಸಲಾಗುವುದು ಎಂದು ಚೀನಾದ ವಿದೇಶಾಂಗ ಇಲಾಖೆ ಘೋಷಿಸಿದೆ.