ಸಿಡ್ನಿಯಲ್ಲಿನ ಅಮೆರಿಕ ಕಾನ್ಸುಲೇಟ್ ಗೆ ಹಾನಿ
![ಸಿಡ್ನಿಯಲ್ಲಿನ ಅಮೆರಿಕ ಕಾನ್ಸುಲೇಟ್ ಗೆ ಹಾನಿ ಸಿಡ್ನಿಯಲ್ಲಿನ ಅಮೆರಿಕ ಕಾನ್ಸುಲೇಟ್ ಗೆ ಹಾನಿ](https://www.varthabharati.in/h-upload/2024/06/10/1271356-sy.webp)
PC : thehindu.com
ಸಿಡ್ನಿ : ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಅಮೆರಿಕ ದೂತಾವಾಸಕ್ಕೆ ಸೋಮವಾರ ಹಾನಿ ಎಸಗಲಾಗಿದ್ದು ಕಚೇರಿಯ ಗ್ಲಾಸನ್ನು ಒಡೆದಿರುವುದಾಗಿ ವರದಿಯಾಗಿದೆ.
ಸೋಮವಾರ ಬೆಳಗ್ಗೆ 3 ಗಂಟೆಗೆ ಕಪ್ಪು ಬಣ್ಣದ ಕೋಟ್ ಧರಿಸಿರುವ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಕಚೇರಿಯ ಗ್ಲಾಸನ್ನು ಒಡೆಯುತ್ತಿರುವುದು ಸಿಸಿ ಟವಿಯಲ್ಲಿ ದಾಖಲಾಗಿದೆ. ಎರಡು ತಲೆಕೆಳಗಾದ ಕೆಂಪು ತ್ರಿಕೋನಗಳ ಚಿತ್ರವನ್ನೂ ಕಚೇರಿಯ ಕಟ್ಟಡದಲ್ಲಿ ಚಿತ್ರಿಸಲಾಗಿದ್ದು ಇದು ಫೆಲೆಸ್ತೀನ್ ಪ್ರತಿರೋಧದ ಸಂಕೇತವಾಗಿರಬಹುದು ಎಂದು ಊಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬಾನೀಸ್ `ಎರಡೂ ಕಡೆಯವರು(ಇಸ್ರೇಲ್-ಫೆಲೆಸ್ತೀನ್ ಬೆಂಬಲಿಗರು) ಪರಿಸ್ಥಿತಿಯನ್ನು ತಣ್ಣಗಾಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ನ್ಯೂಸೌತ್ ವೇಲ್ಸ್ನಲ್ಲಿರುವ ಕಚೇರಿಯನ್ನು ಸೋಮವಾರ ಸರಕಾರಿ ರಜಾದಿನವಾದ ಕಾರಣ ಮುಚ್ಚಿದ್ದು ಮಂಗಳವಾರ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಕಾನ್ಸುಲೇಟ್ನ ಹೇಳಿಕೆ ತಿಳಿಸಿದೆ. ಬಹುತೇಕ ಆಸ್ಟ್ರೇಲಿಯನ್ನರು ಇಂತಹ ದಾಂಧಲೆಯನ್ನು ಸಮ್ಮತಿಸುವುದಿಲ್ಲ ಎಂದು ನ್ಯೂಸೌತ್ ವೇಲ್ಸ್ನ ಪ್ರೀಮಿಯರ್ ಕ್ರಿಸ್ ಮಿನ್ಸ್ ಪ್ರತಿಕ್ರಿಯಿಸಿದ್ದಾರೆ.