ಅಮೆರಿಕ ಸೇನಾನೆಲೆಗಳ ಹಾನಿ ವರದಿಗಿಂತಲೂ ಹೆಚ್ಚು: ವರದಿ

Photo Credit : NDTV
ವಾಶಿಂಗ್ಟನ್, ಮೇ 7: ಇರಾನ್ ಯುದ್ಧ ಆರಂಭವಾದ ಬಳಿಕ ಕುವೈತ್, ಬಹರೈನ್, ಕತರ್, ಸೌದಿ ಅರೇಬಿಯ, ಜೋರ್ಡಾನ್ ಹಾಗೂ ಯುಎಇಯಲ್ಲಿರುವ ಅಮೆರಿಕ ಸೇನಾನೆಲೆಗಳ 200ಕ್ಕೂ ಅಧಿಕ ನಿರ್ಮಾಣಗಳು ಹಾನಿಗೊಂಡಿವೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ಬಹಿರಂಗಪಡಿಸಿದೆ.
ಅಮೆರಿಕ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿರುವ ಹಾನಿ ಪ್ರಮಾಣಕ್ಕಿಂತ ಇದು ಬಹಳ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಪ್ರಕಾರ ಕನಿಷ್ಠ 228 ನಿರ್ಮಾಣಗಳು ಹಾನಿಗೊಂಡಿವೆ ಅಥವಾ ನಾಶವಾಗಿವೆ. 217 ನಿರ್ಮಾಣಗಳು ಹಾಗೂ 11 ಸೇನಾ ಸಲಕರಣೆಗಳಿಗೆ ಹಾನಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬ್ಯಾರಕ್ಗಳು, ಇಂಧನ ಡಿಪೋಗಳು, ವಿಮಾನಗಳು, ರಾಡಾರ್ ವ್ಯವಸ್ಥೆಗಳು, ಸಂವಹನ ಮೂಲಸೌಕರ್ಯಗಳು ಹಾಗೂ ವಾಯುರಕ್ಷಣಾ ವ್ಯವಸ್ಥೆಗಳು ಹಾನಿಗೊಂಡಿವೆ. ದಾಳಿಗಳಲ್ಲಿ ಕುವೈತ್ ನಲ್ಲಿ ಆರು ಮಂದಿ ಹಾಗೂ ಸೌದಿ ಅರೇಬಿಯದಲ್ಲಿ ಒಬ್ಬ ಅಮೆರಿಕ ಯೋಧ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಅವರಲ್ಲಿ 12 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ದಾಖಲಾದ ಹಾನಿಗಳಲ್ಲಿ ಅರ್ಧದಷ್ಟು ಬಹರೈನ್ನಲ್ಲಿರುವ ಅಮೆರಿಕದ ಫಿಫ್ತ್ ಫ್ಲೀಟ್ ಮುಖ್ಯ ಕಚೇರಿ ಹಾಗೂ ಕುವೈತ್ನ ಮೂರು ಪ್ರಮುಖ ಸೇನಾ ನೆಲೆಗಳಲ್ಲಿ ಸಂಭವಿಸಿದೆ. ಕುವೈತ್ ವಾಯುನೆಲೆಯಲ್ಲಿ ಅಮೆರಿಕದ ಇಂಧನ ಸಂಗ್ರಹಾಗಾರಗಳು ಹಾಗೂ ಪೇಟ್ರಿಯಟ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗೂ ಹಾನಿಯಾಗಿದೆ ಎಂದು ವರದಿ ಹೇಳಿದೆ.






