ಗಾಝಾ ಶಾಂತಿ ಯೋಜನೆ: ಇಸ್ರೇಲ್ - ಹಮಾಸ್ ನಡುವಿನ ಮೊದಲ ದಿನದ ಪರೋಕ್ಷ ಮಾತುಕತೆ ʼಸಕಾರಾತ್ಮಕʼವಾಗಿ ಮುಕ್ತಾಯ

ಸಾಂದರ್ಭಿಕ ಚಿತ್ರ (PTI)
ಕೈರೋ : ಗಾಝಾ ಮೇಲಿನ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ಜಾರಿಗೆ ತರುವ ಕುರಿತು ಈಜಿಪ್ಟ್ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆದ ಪರೋಕ್ಷ ಮಾತುಕತೆಯ ಮೊದಲ ದಿನ ಸಕಾರಾತ್ಮಕವಾಗಿ ಕೊನೆಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ aljazeera ವರದಿ ಮಾಡಿದೆ.
ಮಂಗಳವಾರ ಹೆಚ್ಚಿನ ಚರ್ಚೆಗಳು ನಡೆಯಲಿದೆ ಎಂದು ಸಮಾಲೋಚಕರು ತಿಳಿಸಿದ್ದಾರೆ. ಶರ್ಮ್ ಎಲ್-ಶೇಖ್ ನಗರದಲ್ಲಿ ಸೋಮವಾರ ನಡೆದ ಸಭೆಯು ಸಕಾರಾತ್ಮಕವಾಗಿತ್ತು ಮತ್ತು ಮುಂದಿನ ಮಾತುಕತೆ ಹೇಗೆ ಮುಂದುವರಿಯುತ್ತದೆ ಎಂಬುದರ ಕುರಿತು ಮಾರ್ಗಸೂಚಿಯನ್ನು ರೂಪಿಸಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಗಾಝಾ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿರುವುದರಿಂದ ಬಂಧಿತರ ಬಿಡುಗಡೆಯ ಕುರಿತಾದ ಮಾತುಕತೆಗಳಿಗೆ ಸವಾಲನ್ನು ಒಡ್ಡುತ್ತದೆ ಹಮಾಸ್ ಪ್ರತಿನಿಧಿಗಳು ಮಧ್ಯವರ್ತಿಗಳಿಗೆ ತಿಳಿಸಿದ್ದಾರೆ.
ಈ ಸಭೆಯಲ್ಲಿ ಹಮಾಸ್ ನಾಯಕರಾದ ಖಲೀಲ್ ಅಲ್-ಹಯ್ಯಾ ಮತ್ತು ಝಾಹರ್ ಜಬರಿನ್ ಉಪಸ್ಥಿತರಿದ್ದರು. ಮೊದಲ ದಿನದ ಮಾತುಕತೆಯ ವೇಳೆ ಕೈದಿಗಳು ಮತ್ತು ಬಂಧಿತರ ವಿನಿಮಯ, ಕದನ ವಿರಾಮ ಮತ್ತು ಗಾಝಾಗೆ ಪ್ರವೇಶಿಸುವ ಮಾನವೀಯ ನೆರವು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂದು ಈಜಿಪ್ಟ್ನ Al-Qahera News ವರದಿ ಮಾಡಿದೆ.







