ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಖಾಸಗಿ ಔತಣಕೂಟದಲ್ಲಿ ಭಾಗಿಯಾಗಲಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್; ವರದಿ

ಡೊನಾಲ್ಡ್ ಟ್ರಂಪ್ / ಅಸೀಮ್ ಮುನೀರ್ (Photo credit: PTI, X)
ವಾಷಿಂಗ್ಟನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರು ಬುಧವಾರ ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಖಾಸಗಿ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಈ ಭೋಜನ ಕೂಟವು ಕ್ಯಾಬಿನೆಟ್ ಕೊಠಡಿಯಲ್ಲಿ ನಡೆಯಲಿದ್ದು, ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಧ್ಯಕ್ಷರ ದೈನಂದಿನ ಸಾರ್ವಜನಿಕ ವೇಳಾಪಟ್ಟಿಯ ಪ್ರಕಾರ, ಟ್ರಂಪ್ ಮತ್ತು ಅಸೀಮ್ ಮುನೀರ್ ನಡುವಿನ ಭೇಟಿಯು ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಕ್ಯಾಬಿನೆಟ್ ಕೊಠಡಿಯಲ್ಲಿ ನಡೆಯಲಿದೆ.
ಪಾಕಿಸ್ತಾನದ ಮಿಲಿಟರಿ ನಾಯಕ ತಮ್ಮ ಅಮೆರಿಕ ಪ್ರವಾಸದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.
ಐದು ದಿನಗಳ ಅಧಿಕೃತ ಭೇಟಿಗಾಗಿ ರವಿವಾರ ವಾಷಿಂಗ್ಟನ್ ಗೆ ಆಗಮಿಸಿದ ಮುನೀರ್, ಅಮೆರಿಕದೊಂದಿಗೆ ಸೇನಾ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಭೇಟಿಯು ಪ್ರಾಥಮಿಕವಾಗಿ ದ್ವಿಪಕ್ಷೀಯ ಸ್ವರೂಪದ್ದಾಗಿದೆ. ಜೂನ್ 14 ರಂದು ನಡೆದ ಅಮೆರಿಕ ಸೇನೆಯ 250 ನೇ ವಾರ್ಷಿಕೋತ್ಸವದ ಆಚರಣೆಗೆ ಅಧಿಕೃತವಾಗಿ ಸಂಬಂಧಿಸಿದಲ್ಲ ಎಂದು ʼDawnʼ ವರದಿ ಮಾಡಿದೆ
ಈ ಮೊದಲು, ಪಾಕಿಸ್ತಾನಿ ಫೀಲ್ಡ್ ಮಾರ್ಷಲ್ ಅಮೆರಿಕದ ಸೇನಾ ದಿನದ ಪೆರೇಡ್ ನಲ್ಲಿ ಸೇನಾ ದಿನದ ಭಾಗವಹಿಸಲಿದ್ದಾರೆ ಎಂದು ಊಹಾಪೋಗಳು ಹರಡಿದ್ದವು. ಈ ಹೇಳಿಕೆಗಳನ್ನು ಅಮೆರಿಕವು ನಿರಾಕರಿಸಿತ್ತು.







