ಧಾರಾಕಾರ ಮಳೆ, ಪ್ರವಾಹಕ್ಕೆ ನಲುಗಿದ ಟೆಕ್ಸಾಸ್ | ಕನಿಷ್ಠ 24 ಮೃತ್ಯು; 23 ಹುಡುಗಿಯರು ನಾಪತ್ತೆ

Photo : sky news
ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಶುಕ್ರವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಪ್ರವಾಹ ಉಂಟಾಗಿದ್ದು ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ. ಗ್ವಾಡಾಲುಪೆ ನದಿಯ ಬಳಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ 23 ಹುಡುಗಿಯರ ಸಹಿತ ಸುಮಾರು 30 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಶುಕ್ರವಾರ ತಡರಾತ್ರಿಯಿಂದ ನಿರಂತರ ಸುರಿದ ಮಳೆಯಿಂದಾಗಿ ಗ್ವಾಡಾಲುಪೆ ನದಿಯ ನೀರು ಸುಮಾರು 26 ಅಡಿಗಳಷ್ಟು ಏರಿದ್ದು ಕೆರ್ ಕೌಂಟಿಯ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ. ಹಠಾತ್ ಪ್ರವಾಹದಿಂದಾಗಿ ವ್ಯಾಪಕ ಸಾವು-ನೋವು, ನಾಶ-ನಷ್ಟ ಸಂಭವಿಸಿದೆ ಎಂದು ಟೆಕ್ಸಾಸ್ ಗವರ್ನರ್ ಡ್ಯಾನ್ ಪ್ಯಾಟ್ರಿಕ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ನದಿಯ ದಡದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದಲ್ಲಿ 700ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಆಗ ಏಕಾಏಕಿ ನದಿಯ ನೀರು ಉಕ್ಕಿ ಹರಿದಿದ್ದು ನೂರಕ್ಕೂ ಅಧಿಕ ಮಕ್ಕಳು ನಾಪತ್ತೆಯಾಗಿದ್ದರು. ಇವರಲ್ಲಿ ಹೆಚ್ಚಿನವರನ್ನು ಬಳಿಕ ಪತ್ತೆಹಚ್ಚಲಾಗಿದ್ದು ಕನಿಷ್ಠ 23 ಹುಡುಗಿಯರ ಸುಳಿವು ಪತ್ತೆಯಾಗಿಲ್ಲ ಎಂದು ಪ್ಯಾಟ್ರಿಕ್ ಹೇಳಿದ್ದಾರೆ. ಪ್ರಾದೇಶಿಕ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಯ ಕೊರತೆಯಿಂದಾಗಿ ಹಲವು ಪ್ರದೇಶಗಳಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ. ಹಲವು ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು ವ್ಯಾಪಕ ಹಾನಿ ಸಂಭವಿಸಿದೆ ಎಂದು ಕೆರ್ ಕೌಂಟಿಯ ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಟೆಕ್ಸಾಸ್ ನ ಕೆಲವೆಡೆ ಒಂದು ತಿಂಗಳು ಸುರಿಯುವಷ್ಟು ಮಳೆ ಕೆಲವೇ ಗಂಟೆಗಳಲ್ಲಿ ಸುರಿದಿದೆ. ಹಂಟ್ ನಗರದಲ್ಲಿ ಕೇವಲ ಮೂರು ಗಂಟೆಗಳಲ್ಲಿ 6.5 ಇಂಚುಗಳಷ್ಟು ಮಳೆಯಾಗಿದೆ. ಶೋಧ, ರಕ್ಷಣಾ ಕಾರ್ಯಾಚರಣೆಗೆ 400ಕ್ಕೂ ಅಧಿಕ ರಕ್ಷಣಾ ಕಾರ್ಯಕರ್ತರು, 14 ಹೆಲಿಕಾಪ್ಟರ್ಗಳು, ದೋಣಿಗಳು, ಡ್ರೋನ್ಗಳನ್ನು ನಿಯೋಜಿಸಲಾಗಿದೆ. ಟೆಕ್ಸಾಸ್ ನ ಸಾರ್ವಜನಿಕ ಸುರಕ್ಷತಾ ಇಲಾಖೆ, ಹ್ಯೂಸ್ಟನ್ ಅಗ್ನಿಶಾಮಕ ಇಲಾಖೆ ಹಾಗೂ ಫೆಡರಲ್ ಏಜೆನ್ಸಿಗಳ ತಂಡಗಳೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಗವರ್ನರ್ ಗ್ರೆಗ್ ಅಬೋಟ್ ವಿಪತ್ತು ಘೋಷಣೆಯನ್ನು ಜಾರಿಗೊಳಿಸಿದ್ದು ನೆರೆ ಆವೃತ ರಸ್ತೆಗಳನ್ನು ತಪ್ಪಿಸುವಂತೆ ಮತ್ತು ತುರ್ತು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.