ಇಸ್ರೇಲ್ - ಫೆಲೆಸ್ತೀನ್ ಸಂಘರ್ಷ | ರವಿವಾರ ಸಂಜೆ 6ರೊಳಗೆ ಒಪ್ಪಂದಕ್ಕೆ ಬರಬೇಕು; ಹಮಾಸ್ ಗೆ ಡೊನಾಲ್ಡ್ ಟ್ರಂಪ್ ಡೆಡ್ಲೈನ್

ಡೊನಾಲ್ಡ್ ಟ್ರಂಪ್ | Photo Credit : NDTV
ವಾಷಿಂಗ್ಟನ್: ಅಮೆರಿಕದ ಸ್ಥಳೀಯ ಸಮಯ ರವಿವಾರ ಸಂಜೆ 6 ಗಂಟೆಯೊಳಗೆ ಹಮಾಸ್ ಇಸ್ರೇಲ್ ನೊಂದಿಗೆ ಶಾಂತಿ ಒಪ್ಪಂದಕ್ಕೆ ಬರಬೇಕು. ಇಲ್ಲದಿದ್ದರೆ “ಹಮಾಸ್ ವಿರುದ್ಧ ಇತಿಹಾಸದಲ್ಲೇ ಕಾಣದಷ್ಟು ಭೀಕರ ಪರಿಣಾಮಗಳು ಎದುರಾಗಲಿವೆ” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಗಾಝಾದಲ್ಲಿ ಮುಂದುವರಿಯುತ್ತಿರುವ ಯುದ್ಧದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್ ವಿರುದ್ಧ ಶುಕ್ರವಾರ ನೀಡಿದ ಘೋಷಣೆಯಲ್ಲಿ, ಈ ಹೇಳಿಕೆ ನೀಡಿದ್ದಾರೆ.
ಹಮಾಸ್ ಗೆ ನೀಡಲಾಗಿರುವ ಈ ಕೊನೆಯ ಅವಕಾಶದಲ್ಲಿ ಶಾಂತಿ ಯೋಜನೆಯನ್ನು ಅಂಗೀಕರಿಸುವುದು, ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು ಮತ್ತು ತಕ್ಷಣವೇ ಹೋರಾಟವನ್ನು ನಿಲ್ಲಿಸುವುದು ಅನಿವಾರ್ಯ ಎಂದು ಡೊನಾಲ್ಡ್ ಟ್ರಂಪ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ವೇತಭವನವು 20 ಅಂಶಗಳ ಶಾಂತಿ ಯೋಜನೆಯನ್ನು ಬಿಡುಗಡೆ ಮಾಡಿದ್ದು, ಗಾಝಾದ ಯುದ್ಧಾನಂತರದ ಆಡಳಿತ ಚೌಕಟ್ಟನ್ನು ರೂಪಿಸುವುದರ ಜೊತೆಗೆ ತಾತ್ಕಾಲಿಕ ಆಡಳಿತ ಮಂಡಳಿಯನ್ನು ರಚಿಸುವುದನ್ನೂ ಒಳಗೊಂಡಿದೆ. ಈ ಮಂಡಳಿಗೆ ಸ್ವತಃ ಟ್ರಂಪ್ ಅಧ್ಯಕ್ಷತೆ ವಹಿಸಲಿದ್ದು, ಬ್ರಿಟಿಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಸೇರಿದಂತೆ ಅಂತರರಾಷ್ಟ್ರೀಯ ನಾಯಕರು ಸೇರಲಿದ್ದಾರೆ.
ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು “ಹತ್ಯಾಕಾಂಡ” ಎಂದು ಕರೆದ ಟ್ರಂಪ್, ಹಲವು ವರ್ಷಗಳಿಂದ ಹಮಾಸ್ ಮಧ್ಯಪ್ರಾಚ್ಯದಲ್ಲಿ ಬೆದರಿಕೆಯಾಗಿ ಪರಿಣಮಿಸಿದೆ ಎಂದು ಟೀಕಿಸಿದರು.
ಇಸ್ರೇಲ್ದಾ ನಡೆಸಿರುವ ದಾಳಿಯಲ್ಲಿ ಈಗಾಗಲೇ 25,000 ಕ್ಕೂ ಹೆಚ್ಚು ಹಮಾಸ್ ಹೋರಾಟಗಾರರು ಕೊಲ್ಲಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು.
ಫೆಲೆಸ್ತೀನ್ ನಾಗರಿಕರಿಗೆ ಗಾಝಾದಲ್ಲಿನ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮನವಿ ಮಾಡಿದ ಟ್ರಂಪ್, “ಉಳಿದ ಹಮಾಸ್ ನಾಯಕರು ಎಲ್ಲಿದ್ದರೂ ಅವರನ್ನು ಪತ್ತೆಹಚ್ಚಿ ಹತ್ಯೆ ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಟ್ರಂಪ್ ಅವರ ಶಾಂತಿ ಯೋಜನೆಯ ಪ್ರಕಾರ, ಗಾಝಾದಲ್ಲಿ ಯಾರನ್ನೂ ಬಲವಂತವಾಗಿ ಸ್ಥಳಾಂತರಿಸಲಾಗುವುದಿಲ್ಲ. ಹಮಾಸ್ ಮತ್ತು ಇಸ್ರೇಲ್ ಎರಡೂ ಈ ಪ್ರಸ್ತಾವನೆಗೆ ಒಪ್ಪಿದ ಕೂಡಲೇ ಹೋರಾಟ ತಕ್ಷಣ ನಿಲ್ಲಿಸಲಿವೆ.







