ಇರಾನ್ ಜೊತೆ ನಾಳೆ ಒಪ್ಪಂದಕ್ಕೆ ಸಹಿ; ಹಾರ್ಮುಝ್ ಜಲಸಂಧಿ ಎಲ್ಲರಿಗೂ ಮುಕ್ತ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಜೂ.13: ಮಧ್ಯಪ್ರಾಚ್ಯದಲ್ಲಿ ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದ ಬಹುನಿರೀಕ್ಷಿತ ಒಪ್ಪಂದಕ್ಕೆ ರವಿವಾರ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣ ಹಾರ್ಮುಝ್ ಜಲಸಂಧಿ ಎಲ್ಲ ರಾಷ್ಟ್ರಗಳಿಗೂ ಮುಕ್ತವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಈ ಕುರಿತು ಶನಿವಾರ ಪೋಸ್ಟ್ ಮಾಡಿರುವ ಟ್ರಂಪ್, ‘ಈ ಒಪ್ಪಂದಕ್ಕೆ ನಾಳೆ ಸಹಿ ಹಾಕಲು ನಿರ್ಧರಿಸಲಾಗಿದೆ. ಒಪ್ಪಂದ ಜಾರಿಯಾದ ತಕ್ಷಣ ಹಾರ್ಮುಝ್ ಜಲಸಂಧಿ ಎಲ್ಲರಿಗೂ ಮುಕ್ತವಾಗಲಿದೆ’ ಎಂದು ಹೇಳಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲಿ ಇರಾನ್ ನೊಂದಿಗೆ ಮಾಡಿಕೊಂಡಿದ್ದ ಜಂಟಿ ಸಮಗ್ರ ಕಾರ್ಯಯೋಜನೆ (JCPOA) ಒಪ್ಪಂದವನ್ನು ಟೀಕಿಸಿರುವ ಟ್ರಂಪ್, ತಮ್ಮ ಪ್ರಸ್ತಾವಿತ ಒಪ್ಪಂದವು ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
‘ಒಬಾಮಾ ಅವರ JCPOA ಒಪ್ಪಂದವು ಇರಾನ್ ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಸುಲಭ ಹಾಗೂ ಸುಗಮ ಮಾರ್ಗವಾಗಿತ್ತು. ಆ ಒಪ್ಪಂದ ಮುಂದುವರಿದಿದ್ದರೆ ಇರಾನ್ ಆರು ವರ್ಷಗಳ ಹಿಂದೆಯೇ ಪರಮಾಣು ಶಸ್ತ್ರಾಸ್ತ್ರ ಹೊಂದಿರುತ್ತಿತ್ತು. ಆದರೆ, ನನ್ನ ಒಪ್ಪಂದವು ಪರಮಾಣು ಶಸ್ತ್ರಾಸ್ತ್ರಗಳಿಲ್ಲದಿರುವಿಕೆಯನ್ನು ಖಚಿತಪಡಿಸುವ ಭದ್ರ ಗೋಡೆಯಂತಿದೆ’ ಎಂದು ಅವರು ಬರೆದಿದ್ದಾರೆ.
ಇರಾನ್ ಇನ್ನು ಮುಂದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಯಸುವುದಿಲ್ಲ. ಭವಿಷ್ಯದಲ್ಲಿ ಖರೀದಿ, ಅಭಿವೃದ್ಧಿ ಅಥವಾ ಯಾವುದೇ ಮಾರ್ಗದ ಮೂಲಕ ಅಂತಹ ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಪ್ರಸ್ತುತ ಅಮೆರಿಕ ಆಡಳಿತವು ಇರಾನ್ ನೊಂದಿಗೆ ಹಿಂದಿನ ಆಡಳಿತಕ್ಕಿಂತ ಉತ್ತಮ ಮತ್ತು ಭಿನ್ನ ಸಂಬಂಧ ಹೊಂದಿದೆ ಎಂದೂ ಅವರು ಹೇಳಿದ್ದಾರೆ.
ಯುರೇನಿಯಂ ಸಂಗ್ರಹ ನಾಶಕ್ಕೆ ಸೂಚನೆ
ಇರಾನ್ ನ ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹವನ್ನು ಅಮೆರಿಕ ಸ್ವಾಧೀನಪಡಿಸಿಕೊಂಡು ನಾಶಪಡಿಸುವ ಸೂಚನೆಯನ್ನೂ ಟ್ರಂಪ್ ತಮ್ಮ ಪೋಸ್ಟ್ ನಲ್ಲಿ ನೀಡಿದ್ದಾರೆ.
‘ಸೂಕ್ತ ಸಮಯದಲ್ಲಿ ಮತ್ತು ಪರಿಸ್ಥಿತಿ ಶಾಂತವಾದ ಬಳಿಕ, ಗ್ರಾನೈಟ್ ಪರ್ವತಗಳ ಅಡಿಯಲ್ಲಿ ಆಳವಾಗಿ ಹೂತುಹಾಕಿರುವ ಪರಮಾಣು ವಸ್ತುಗಳನ್ನು ಹೊರತೆಗೆದು, ನಮ್ಮ ಬಿ–2 ಬಾಂಬರ್ ಗಳು ಹಾಗೂ ಅವುಗಳ ಪೈಲಟ್ ಗಳ ನೆರವಿನಿಂದ ಅಮೆರಿಕ ಅಥವಾ ಇರಾನ್ ನಲ್ಲಿ ಅವನ್ನು ನಾಶಪಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
‘ಭವಿಷ್ಯದಲ್ಲಿ ಇರಾನ್ ಹಾಗೂ ಇಡೀ ಮಧ್ಯಪ್ರಾಚ್ಯದೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ’ ಎಂದೂ ತಿಳಿಸಿದ್ದಾರೆ.
ಒಪ್ಪಂದದ ಅನುಷ್ಠಾನ ಕುರಿತು ಎಚ್ಚರಿಕೆ ನೀಡಿರುವ ಟ್ರಂಪ್, ‘ಈ ಪ್ರಕ್ರಿಯೆ ತ್ವರಿತವಾಗಿ, ಸುಲಭವಾಗಿ ಮತ್ತು ಸರಾಗವಾಗಿ ನಡೆಯುತ್ತದೆ ಎಂದು ಆಶಿಸುತ್ತೇವೆ. ಹಾಗಾಗದಿದ್ದರೆ ನಮ್ಮ ಬಳಿ ಅಂತಿಮ ಪರ್ಯಾಯವಿದೆ. ಅದನ್ನು ಮತ್ತೆ ಬಳಸುವ ಅಗತ್ಯ ಬಾರದಿರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಅಮೆರಿಕದೊಂದಿಗೆ ಪ್ರಸ್ತಾವಿತ ಜ್ಞಾಪಕ ಪತ್ರಕ್ಕೆ ರವಿವಾರ ಸಹಿ ಹಾಕಲಾಗುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಹೇಳಿದ್ದಾರೆ.






