ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಡೆಲ್ಸಿ ರಾಡ್ರಿಗೆಸ್ ಯಾರು?

ಡೆಲ್ಸಿ ರಾಡ್ರಿಗೆಸ್ | Photo Credit : AP \ PTI
ಕ್ಯಾರಾಕಸ್: ಶನಿವಾರ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಬಳಿಕ ವೆನೆಝುವೆಲಾ ಹೊಸ, ಅನಿಶ್ಚಿತ ಹಂತವನ್ನು ಪ್ರವೇಶಿಸಿದೆ. ತಕ್ಷಣವೇ ಪರ್ಯಾಯ ಆಡಳಿತ ವ್ಯವಸ್ಥೆಯನ್ನು ಘೋಷಿಸದ ಕಾರಣ ದೇಶದ ಸರ್ವೋಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಅಧ್ಯಕ್ಷರ ಅನುಪಸ್ಥಿತಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗೆಸ್ ಅವರಿಗೆ ಆದೇಶಿಸಿತ್ತು.
ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರು ಅಮೆರಿಕದ ಪಡೆಗಳಿಂದ ಬಂಧಿಸಲ್ಪಟ್ಟ ಕೆಲವೇ ಗಂಟೆಗಳಲ್ಲಿ ರಾಡ್ರಿಗೆಸ್ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅದೇ ದಿನ ತನ್ನ ಅಧ್ಯಕ್ಷ್ಯತೆಯಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ಮಂಡಳಿಯ ಸಭೆಯಲ್ಲಿ ಅವರು, ಮಡುರೊ ದಂಪತಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು ಮತ್ತು ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ಬಲವಾಗಿ ಖಂಡಿಸಿದರು.
ದೂರದರ್ಶನದಲ್ಲಿ ಪ್ರಸಾರಗೊಂಡ ಭಾಷಣದಲ್ಲಿ ರಾಡ್ರಿಗೆಸ್, ಶನಿವಾರ ನಸುಕಿನಲ್ಲಿ ನಡೆದ ದಾಳಿಯು ಅಂತರರಾಷ್ಟ್ರೀಯ ಕಾನೂನು ಮತ್ತು ವೆನೆಝುವೆಲಾದ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. ಒಗ್ಗಟ್ಟಿನಿಂದಿರುವಂತೆ ವೆನೆಝುವೆಲಾ ಪ್ರಜೆಗಳಿಗೆ ಕರೆ ನೀಡಿದ ಅವರು,ಸಾರ್ವಭೌಮ ದೇಶದ ವಿರುದ್ಧ ಬಲಪ್ರಯೋಗವನ್ನು ತಿರಸ್ಕರಿಸುವಂತೆ ಲ್ಯಾಟಿನ್ ಅಮೆರಿಕ ದೇಶಗಳನ್ನು ಆಗ್ರಹಿಸಿದರು.
ಮಡುರೊ ಬಂಧಿಸಲ್ಪಟ್ಟಿದ್ದರೂ ಅವರು ವೆನೆಝುವೆಲಾದ ಶಾಸನಬದ್ಧ ಅಧ್ಯಕ್ಷರಾಗಿದ್ದಾರೆ ಎಂದು ಪ್ರತಿಪಾದಿಸಿದ ಅವರು, ‘ಈ ದೇಶದಲ್ಲಿ ಒಬ್ಬರೇ ಅಧ್ಯಕ್ಷರಿದ್ದಾರೆ ಮತ್ತು ಅವರ ಹೆಸರು ನಿಕೋಲಸ್ ಮಡುರೊ’ ಎಂದು ಹೇಳಿದರು.
ಅತ್ತ, ಮಡುರೊ ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ವಾಷಿಂಗ್ಟನ್ ಜೊತೆ ಸಹಕರಿಸಲು ರಾಡ್ರಿಗೆಸ್ ಸಿದ್ಧರಿದ್ದಾರೆ. ಅವರು ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಮತ್ತು ಅಮೆರಿಕಕ್ಕೆ ಅಗತ್ಯವಿರುವ ‘ಏನು ಬೇಕಾದರೂ’ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಯಾರು ಈ ಡೆಲ್ಸಿ ರಾಡ್ರಿಗೆಸ್?
ರಾಡ್ರಿಗೆಸ್ ಕ್ಯಾರಕಾಸ್ನ ಅನುಭವಿ ನ್ಯಾಯವಾದಿಯಾಗಿದ್ದು, ವೆನೆಜುವೆಲಾ ಕೇಂದ್ರೀಯ ವಿವಿಯಲ್ಲಿ ಕಾನೂನು ಅಧ್ಯಯನವನ್ನು ಮಾಡಿದ್ದಾರೆ.
ರಾಡ್ರಿಗೆಸ್ 1990ರ ದಶಕದ ಕೊನೆಯಲ್ಲಿ ಮಾಜಿ ಅಧ್ಯಕ್ಷ ಹ್ಯೂಗೊ ಚಾವೆಜ್ ಅವರ ಆಲೋಚನೆಗಳು ಮತ್ತು ನೀತಿಗಳನ್ನು ಆಧರಿಸಿ ಆರಂಭಗೊಂಡ ಚಾವಿಸ್ಮೊ ಆಂದೋಲನದಲ್ಲಿ ಕಳೆದ ಎರಡು ದಶಕಗಳಿಂದಲೂ ಪ್ರಮುಖ ವ್ಯಕ್ತಿಯಾಗಿದ್ದು,ಮಡುರೊ ಅವರ ಅತ್ಯಂತ ನಿಕಟ ಮತ್ತು ಅತ್ಯಂತ ವಿಶ್ವಾಸಾರ್ಹ ರಾಜಕೀಯ ಮಿತ್ರರಲ್ಲಿ ಓರ್ವರೆಂದು ಪರಿಗಣಿಸಲ್ಪಟ್ಟಿದ್ದಾರೆ.
ವಿದೇಶಾಂಗ ಸಚಿವೆ ಹುದ್ದೆ ಸೇರಿದಂತೆ ಸರಕಾರದಲ್ಲಿ ಹಲವಾರು ಪ್ರಭಾವಿ ಪಾತ್ರಗಳನ್ನು ರಾಡ್ರಿಗೆಸ್ ನಿರ್ವಹಿಸಿದ್ದಾರೆ.
ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರಿ ವಹಿಸಿಕೊಳ್ಳುವ ಮುನ್ನ ಅವರು ಪ್ರಮುಖ ಆರ್ಥಿಕ ಖಾತೆಗಳ ಉಸ್ತುವಾರಿಯನ್ನೂ ಹೊಂದಿದ್ದು,ಹಣಕಾಸು ಮತ್ತು ದೇಶದ ತೈಲ ಕ್ಷೇತ್ರದ ಮೇಲ್ವಿಚಾರಣೆಯನ್ನು ಹೊಂದಿದ್ದರು.
ಅವರು ವೆನೆಝುವೆಲಾದ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಜಾರ್ಜ್ ರಾಡ್ರಿಗೆಸ್ ಅವರ ಸೋದರಿಯಾಗಿದ್ದು,ಇಬ್ಬರೂ ಮಾಜಿ ಅಧ್ಯಕ್ಷ ಚಾವೆಜ್ ಅವರ ಕಾಲದಿಂದಲೂ ಸರಕಾರದಲ್ಲಿ ಪ್ರಮುಖ ವ್ಯಕ್ತಿಗಳಾಗಿದ್ದಾರೆ.







